ADVERTISEMENT

ಮೀಸಲಾತಿ ಪರಾಮರ್ಶೆ ಅಗತ್ಯ ಇಲ್ಲ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2015, 19:30 IST
Last Updated 22 ಸೆಪ್ಟೆಂಬರ್ 2015, 19:30 IST

ನವದೆಹಲಿ (ಪಿಟಿಐ): ಈಗಿರುವ ಮೀಸಲಾತಿ ವ್ಯವಸ್ಥೆಯನ್ನು ಪರಾಮರ್ಶಿಸುವ ಬಗ್ಗೆ ಸರ್ಕಾರ ಒಲವು ಹೊಂದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಈಗಿರುವ ಮೀಸಲಾತಿ ನೀತಿ ಪುನರ್‌ಪರಿಶೀಲಿಸಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸಲಹೆ ನೀಡಿದ್ದಕ್ಕೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಈ ಸ್ಪಷ್ಟನೆ ನೀಡಿದೆ.

ಈ ವಿಷಯವಾಗಿ ಸೋಮವಾರ ಬಿಜೆಪಿ ಕಚೇರಿಯಲ್ಲಿ ತೆಗೆದುಕೊಂಡ ನಿರ್ಧಾರವನ್ನೇ ಕೇಂದ್ರ ಸಚಿವ ರವಿ ಶಂಕರ್‌ ಪ್ರಸಾದ್‌ ಪುನರುಚ್ಚರಿಸಿದರು. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿ ನೀತಿಯನ್ನು ಪರಾಮರ್ಶಿಸುವ ಅಗತ್ಯವಿಲ್ಲ. 

ಇದು  ಪಕ್ಷ ಹಾಗೂ ಸರ್ಕಾರದ ನಿರ್ಧಾರವಾಗಿದೆ. ನಮ್ಮ ಸರ್ಕಾರವು ಪರಿಶಿಷ್ಟ ಜಾತಿ/ ಪಂಗಡ, ಹಿಂದುಳಿದ  ಜಾತಿಗಳು ಹಾಗೂ ತೀರಾ ಹಿಂದುಳಿದ ಜಾತಿಗಳಿಗೆ ಈಗಿರುವ ಮೀಸಲಾತಿ ನೀತಿಯನ್ನು ಬದಲಾಯಿಸುವುದಕ್ಕೆ ಒಲವು ಹೊಂದಿಲ್ಲ.   ಹಿಂದುಳಿದ ವರ್ಗಗಳ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಮೀಸಲಾತಿ ವ್ಯವಸ್ಥೆ ಅಗತ್ಯವಿದೆ. ಆದ ಕಾರಣ ಇದನ್ನು ಪರಾಮರ್ಶಿಸುವ ಅಗತ್ಯ ಇಲ್ಲ’ ಎಂದರು.

ಭಾಗವತ್‌ ಹೇಳಿಕೆಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಆರ್‌ಜೆಡಿಯ ಲಾಲು ಪ್ರಸಾದ್‌, ಜೆಡಿಯು ಮುಖಂಡ ನಿತೀಶ್‌ ಕುಮಾರ್‌ ಮತ್ತಿತರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಿರುವ ಮೀಸಲಾತಿ ವ್ಯವಸ್ಥೆಯನ್ನು ಪರಾಮರ್ಶಿಸುವ ಕೆಲಸಕ್ಕೆ ಕೈಹಾಕಿದರೆ  ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.

ವಿಎಚ್‌ ಬೆಂಬಲ: ಈ ನಡುವೆ,  ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಭಾಗವತ್‌ ಸಲಹೆಯನ್ನು ಬೆಂಬಲಿಸಿದೆ. ಫಲಾನುಭವಿ ಜಾತಿಗಳಿಗೆ ಇನ್ನು ಮುಂದೆಯೂ ಮೀಸಲಾತಿ ಬೇಕೇ ಎನ್ನುವುದನ್ನು ಪರಾಮರ್ಶಿಸುವುದಕ್ಕೆ   ನ್ಯಾಯಾಂಗ ಆಯೋಗ ರಚಿಸುವಂತೆ ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌  ಕೇಂದ್ರವನ್ನು ಕೇಳಿಕೊಂಡಿದ್ದಾರೆ.

*
ಆರ್‌ಎಸ್‌ಎಸ್‌ ಕುಮ್ಮಕ್ಕಿನಿಂದ  ಸರ್ಕಾರವು  ಈಗಿರುವ ಮೀಸಲಾತಿ ವ್ಯವಸ್ಥೆ ಬದಲಾಯಿಸುವ ಧೈರ್ಯ ಮಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ
-ಮಾಯಾವತಿ,
ಬಿಎಸ್‌ಪಿ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.