ADVERTISEMENT

ಮೀಸಲಾತಿ ರದ್ದು ಇಲ್ಲ ಕೇಂದ್ರ ಸರ್ಕಾರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST

ನವದೆಹಲಿ: ದಲಿತರು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ವಾಪಸ್‌ ಪಡೆಯುವ ಯೋಚನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.  

ಮೀಸಲಾತಿ ಹಿಂಪಡೆಯುವ ಉದ್ದೇಶದಿಂದಲೇ ಹಿಂದುಳಿದ ವರ್ಗಗಳ ಆಯೋಗದ (ಎನ್‌ಸಿಬಿಸಿ) ಹೆಸರನ್ನು ಬದಲಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಆರೋಪಿಸಿದ್ದರಿಂದ, ಸರ್ಕಾರ ಸ್ಪಷ್ಟನೆ ನೀಡಿತು.

‘ಯಾದವ, ಕುರ್ಮಿ, ಲೋಧಾ ಸಮುದಾಯಗಳು ಸಾಮಾಜಿಕವಾಗಿ ಸ್ವಲ್ಪ ಪ್ರಮಾಣದ ಪ್ರಗತಿ ಸಾಧಿಸಿವೆ.  ಎನ್‌ಸಿಬಿಸಿಯನ್ನು ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕೇಂದ್ರ ಆಯೋಗ’ ಎಂದು ಬದಲಿಸುವುದರ ಮೂಲಕ ಈ ಸಮುದಾಯಗಳಿಗೆ  ನೀಡಲಾಗಿರುವ ಮೀಸಲಾತಿಯನ್ನು ರದ್ದು ಮಾಡಲಾಗುತ್ತದೆ. ಇದು, ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದು ಮಾಡುವ ದೊಡ್ಡ ಸಂಚಿನ ಒಂದು ಭಾಗ’ ಎಂದು ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್‌ ರಾಜ್ಯಸಭೆಯಲ್ಲಿ ಹೇಳಿದರು.

ADVERTISEMENT

ಉಳಿದ ವಿರೋಧ ಪಕ್ಷಗಳೂ ರಾಮಗೋಪಾಲ್‌ ವಾದಕ್ಕೆ ಬೆಂಬಲ ನೀಡಿದವು. ಜತೆಗೆ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಆಗ ಕೇಂದ್ರ ಸಚಿವ ತಾವರ್‌ಚಂದ್ ಗೆಹ್ಲೋಟ್, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ಮುಂದುವರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆಯೇ ಭರವಸೆ ನೀಡಿದ್ದಾರೆ. ಮೀಸಲಾತಿಯನ್ನು ಹಿಂಪಡೆಯುವುದಿಲ್ಲ’  ಎಂದು ವಿವರಣೆ ನೀಡಿದರು.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವನ್ನು (ಎನ್‌ಸಿಬಿಸಿ), ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವನ್ನಾಗಿ  ಬದಲಿಸಿ, ಅದಕ್ಕೆ ಸಾಂವಿಧಾನಿಕ ಸಂಸ್ಥೆಯ ಸ್ಥಾನ ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.