ADVERTISEMENT

ಮುಂದಿನ ವರ್ಷದಿಂದಲೇ ಜಿಎಸ್‌ಟಿ: ಮೋದಿ ಆಶಯ

ಬಂಡವಾಳ ಹೂಡಿಕೆಗೆ ಭಾರತದಲ್ಲಿ ಪ್ರಶಸ್ತ ವಾತಾವರಣ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 20:12 IST
Last Updated 6 ಅಕ್ಟೋಬರ್ 2015, 20:12 IST

ಬೆಂಗಳೂರು (ಪಿಟಿಐ): ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಮುಂದಿನ ವರ್ಷದಿಂದ ಜಾರಿಗೆ ತರುವ ಆಶಾಭಾವವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದರು.

‘ಜಿಎಸ್‌ಟಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. 2016ರಿಂದ ಅದನ್ನು ಕಾಯ್ದೆಯಾಗಿ ಜಾರಿಗೆ ತರುವ ವಿಶ್ವಾಸವಿದೆ’ ಎಂದು ಅವರು ಮಂಗಳವಾರ ಇಲ್ಲಿ ನಡೆದ ಭಾರತ– ಜರ್ಮನಿ ಶೃಂಗಸಭೆಯಲ್ಲಿ ಹೇಳಿದರು.

ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು. ಭಾರತೀಯ ಉದ್ಯಮ ರಂಗದ, ಅದರಲ್ಲೂ ಪ್ರಮುಖವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಭಾರತ ಆಶಾಕಿರಣ: ‘ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಕುಸಿತ ಕಂಡುಬಂದರೂ, ಭಾರತ ಮಾತ್ರ ಆಶಾಕಿರಣದಂತೆ ಕಾಣುತ್ತಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಕಠಿಣ ಕ್ರಮ ಕೈಗೊಳ್ಳುವುದೂ ಸೇರಿದಂತೆ, ವಾಣಿಜ್ಯ ವಹಿವಾಟು ನಡೆಸಲು ಪೂರಕ ವಾತಾವರಣ ನಿರ್ಮಿಸುವುದಾಗಿ’ ಪ್ರಧಾನಿ ವಿದೇಶಗಳ ಬಂಡವಾಳ ಹೂಡಿಕೆದಾರರಿಗೆ ಭರವಸೆ ನೀಡಿದರು.

‘ಪ್ರತಿಭೆ, ತಂತ್ರಜ್ಞಾನ ಮತ್ತು ಬಂಡವಾಳವನ್ನು ಹೊರದೇಶಗಳಿಂದ ಆಕರ್ಷಿಸಲು ಭಾರತದಲ್ಲಿ ಇಷ್ಟು ಉತ್ತಮವಾದ ವಾತಾವರಣ ಹಿಂದೆಂದೂ ಇರಲಿಲ್ಲ’ ಎಂದು ಮೋದಿ ಹೇಳಿದರು.

ಉತ್ಪಾದನಾ ರಂಗದಲ್ಲಿ ಭಾರತಕ್ಕೆ ಇರುವಷ್ಟು ಶಕ್ತಿ ಬೇರೆ ಯಾವ ದೇಶಕ್ಕೂ ಇಲ್ಲ ಎಂದೂ ವಿಶ್ವಾಸದಿಂದ ಹೇಳಿದರು.
‘ಹೂಡಿಕೆದಾರರು ಬಹಳ ಕಾಲದಿಂದ ವ್ಯಕ್ತಪಡಿಸುತ್ತಿದ್ದ ಕಳವಳವನ್ನು ದೂರಮಾಡಲು ನಿರ್ಣಾಯಕ ಕ್ರಮ ಕೈಗೊಳ್ಳಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ ಅಗತ್ಯವಿರುವ ಅನುಮತಿಗಳನ್ನು ತ್ವರಿತವಾಗಿ ನೀಡಲಾಗುತ್ತಿದೆ. ವಾಣಿಜ್ಯೋದ್ಯಮಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧವಾಗಿದೆ’ ಎಂಬ ಭರವಸೆ ನೀಡಿದರು.

ಜರ್ಮನಿ ಜೊತೆ ಹಲವಾರು ಕ್ಷೇತ್ರಗಳಲ್ಲಿ ಸಂಬಂಧ ಸ್ಥಾಪಿಸಲು ಭಾರತ ಬಯಸುತ್ತದೆ. ಭಾರತ ಮತ್ತು ಜರ್ಮನಿ ನಡುವೆ ಇನ್ನಷ್ಟು ವಾಣಿಜ್ಯ ಒಪ್ಪಂದಗಳಿಗೆ ಅವಕಾಶವಿದೆ. ಭಾರತದ ಸಾಫ್ಟ್‌ವೇರ್‌ ಜಗತ್ತಿನ ಹಾರ್ಡ್‌ವೇರ್‌ಗಳ ಚಾಲನಾ ಶಕ್ತಿಯಾಗಿದೆ ಎಂದರು. 

ಕೌಶಲ ಅಭಿವೃದ್ಧಿ, ಯಂತ್ರ ವಿನ್ಯಾಸ ಸೇರಿದಂತೆ ಐದು ಒಪ್ಪಂದಗಳಿಗೆ ಮೋದಿ ಮತ್ತು ಮರ್ಕೆಲ್ ಸಮ್ಮುಖದಲ್ಲಿ ಸಹಿ ಹಾಕಲಾಯಿತು.

ವಿಶ್ವಸಂಸ್ಥೆಯ ಸುಧಾರಣೆ: ಜಿ–4 ರಾಷ್ಟ್ರಗಳ (ಭಾರತ, ಜರ್ಮನಿ, ಬ್ರೆಜಿಲ್, ಜಪಾನ್) ಜೊತೆಗೂಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರುವ ಕೆಲಸ ಮಾಡುತ್ತಿರುವುದಾಗಿ ಮರ್ಕೆಲ್ ಹೇಳಿದರು.

ಮರ್ಕೆಲ್‌ ಮತ್ತು ಭಾರತದ ಪ್ರಮುಖ ಕಂಪೆನಿಗಳ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ಅವರು ಮಧ್ಯಾಹ್ನದ ಭೋಜನ ಕೂಟ ಆಯೋಜಿಸಿದ್ದರು. ಸಮಾವೇಶವನ್ನು ಸಾಫ್ಟ್‌ವೇರ್‌ ಮತ್ತು ಸೇವಾ ಕಂಪೆನಿಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಹಾಗೂ ಜರ್ಮನಿಯ ಫ್ರಾನ್‌ಹಾಫರ್‌ ಇನ್‌ಸ್ಟಿಟ್ಯೂಟ್‌ ಈ ಶೃಂಗಭೆ ಆಯೋಜಿಸಿದ್ದವು.

* ಭಾರತ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ. ಆದರೆ ಇಷ್ಟಕ್ಕೇ ತೃಪ್ತಿಹೊಂದುವಂತಿಲ್ಲ.
-ನರೇಂದ್ರ ಮೋದಿ

* ಜರ್ಮನಿಯ ಎಂಜಿನಿಯರಿಂಗ್‌ ಜ್ಞಾನ ಮತ್ತು ಭಾರತದ ಮಾಹಿತಿ ತಂತ್ರಜ್ಞಾನ ಪರಿಣತಿ ಬೆಂಗಳೂರಿನಲ್ಲಿ ಸಮ್ಮಿಳಿತವಾಗಿದೆ.
-ಏಂಜೆಲಾ ಮರ್ಕೆಲ್‌

ಪ್ರಧಾನಿ ಹೇಳಿದ್ದು
* ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆಗೆ ಶೀಘ್ರ ಪ್ರಗತಿಪರ ಮತ್ತು ದೂರದೃಷ್ಟಿಯ ನೀತಿ
* ಕೈಗಾರಿಕೆ ಸ್ಥಾಪನೆಗೆ ತ್ವರಿತ ಅನುಮತಿ ನೀಡಲಾಗುತ್ತಿದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.