ADVERTISEMENT

ಮುಯ್ಯಿಗೆ ಮುಯ್ಯಿ: ಷಾ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2014, 19:30 IST
Last Updated 8 ಅಕ್ಟೋಬರ್ 2014, 19:30 IST

ಚಾಲೀಸ್‌ಗಾಂವ್‌ (ಮಹಾರಾಷ್ಟ್ರ), (ಪಿಟಿಐ): ಪಾಕಿಸ್ತಾನ ಪಡೆಯು ಗಡಿ­ಯಲ್ಲಿ ನಿರಂತರವಾಗಿ ದಾಳಿ ನಡೆಸು­ತ್ತಿದ್ದರೂ ಸರ್ಕಾರ ಸುಮ್ಮನೆ ಕೂತಿದೆ ಎಂಬ ಕಾಂಗ್ರೆಸ್‌್ ಟೀಕೆಗೆ ಎದಿರೇಟು ನೀಡಿರುವ ಬಿಜೆಪಿ, ‘ಈಗಿನ ಸರ್ಕಾರ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರ­ದಂತಲ್ಲ. ಕದನ ವಿರಾಮ ಉಲ್ಲಂಘನೆ ವಿಷಯದಲ್ಲಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತದೆ’ ಎಂದಿದೆ.

‘ಹಿಂದೆ ಕೂಡ  ಗಡಿಯಾಚೆಗೆ ಗುಂಡಿನ ದಾಳಿ ನಡೆಯುತ್ತಿತ್ತು. ಈಗಲೂ ದಾಳಿ ನಡೆಯುತ್ತಿದೆ. ಆಗ ಪಾಕಿ­ಸ್ತಾನವೇ ದಾಳಿ ಶುರುಮಾಡಿ ಅದೇ ದಾಳಿಯನ್ನು ಕೊನೆಗೊಳಿ­ಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪಾಕ್‌ ಪಡೆ ಶುರುಮಾಡಿರುವ ದಾಳಿಯನ್ನು ಭಾರತದ ಸೇನೆ ಕೊನೆಗೊಳಿಸುತ್ತದೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಹೇಳಿದ್ದಾರೆ.

‘ಕಾಂಗ್ರೆಸ್‌್ ಸರ್ಕಾರ ಅಧಿಕಾರದ­ಲ್ಲಿದ್ದಾಗ ಕೂಡ ಗಡಿಯಲ್ಲಿ ಪರಿಸ್ಥಿತಿ  ಈಗಿನದಕ್ಕಿಂತ ಭಿನ್ನವಾಗಿರಲಿಲ್ಲ. ಸೋನಿ­ಯಾಜಿ ನೀವು ‘‘ವಿದೇಶಿ’’ ಕನ್ನಡಕ ಧರಿಸಿದ್ದೀರಿ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಏನು ಬದಲಾಗಿದೆ ಎನ್ನುವುದನ್ನು ನಾನು ನಿಮಗೆ ಹೇಳುತ್ತೇನೆ. ಕದನ ವಿರಾಮ ಉಲ್ಲಂಘನೆ ವಿಷಯದಲ್ಲಿ ನಾವು ಮುಯ್ಯಿಗೆ ಮುಯ್ಯಿ ತೀರಿಸಿಕೊ­ಳ್ಳುತ್ತೇವೆ’ ಎಂದು ಜಲಗಾಂವ್‌್ ಜಿಲ್ಲೆ­ಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ‘ಮೌನಿ ಬಾಬಾ’ ಎಂದು ಮೂದಲಿಸಿದ ಅವರು, ‘ಇಡೀ ದೇಶ ಅವರ ಮಾತು ಕೇಳಲು ಕಾಯುತ್ತಿತ್ತು. ಆದರೆ ಅವರು ತಮ್ಮ ಬಾಯಿ ಬಿಡಲೇ ಇಲ್ಲ. ಈಗ ನಮ್ಮ ದೇಶಕ್ಕೆ ಮಾತನಾಡುವ ಪ್ರಧಾನಿ ಸಿಕ್ಕಿದ್ದಾರೆ’ ಎಂದರು.

‘ಮನಮೋಹನ್‌ ಸಿಂಗ್‌ ಅವರು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಆ ವಿಷಯ ಯಾರಿಗೂ ಗೊತ್ತಾಗುತ್ತಲೇ ಇರಲಿಲ್ಲ. ಆದರೆ ಮೋದಿ ಅವರ ವಿದೇಶ ಪ್ರವಾಸ ಇಡೀ ಜಗತ್ತಿಗೇ ಗೊತ್ತಾಗುತ್ತದೆ. ಮೋದಿ ಅವರ ಮಾತು ಆಲಿಸಲು ಅಮೆರಿಕದಲ್ಲಿ ಶ್ವೇತವರ್ಣೀಯರು ಸಾಲುಗಟ್ಟಿ ನಿಂತಿದ್ದನ್ನು ನೋಡಿದಾಗ ಖುಷಿಯಾಗುವುದಿಲ್ಲವೇ’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.