ADVERTISEMENT

ಮುರಿದು ಬಿದ್ದ ‘ಮಹಾ’ಮೈತ್ರಿ

ಕಾಲು ಶತಮಾನದ ಸೇನಾ–ಬಿಜೆಪಿ ಯುತಿಭಂಗ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2014, 4:25 IST
Last Updated 26 ಸೆಪ್ಟೆಂಬರ್ 2014, 4:25 IST

ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ– ಶಿವ­ಸೇನಾ ಮತ್ತು ಕಾಂಗ್ರೆಸ್‌– ಎನ್‌ಸಿಪಿ ಮೈತ್ರಿ ಗುರು­ವಾರ ರಾತ್ರಿ ಮುರಿದು ಬಿದ್ದಿದೆ. ಇದರಿಂ­ದಾಗಿ ಅಕ್ಟೋ­­ಬರ್‌ 15 ರಂದು ನಡೆಯುವ ವಿಧಾನ­ಸಭೆ ಚುನಾ­ವಣೆ­ಯಲ್ಲಿ ಬಹು­ಮುಖ ಸ್ಪರ್ಧೆ ಅನಿ­ವಾರ್ಯ­ವಾಗಿದೆ.

ಬಿಜೆಪಿ– ಶಿವಸೇನಾ ಹಾಗೂ ಕಾಂಗ್ರೆಸ್‌– ಎನ್‌ಸಿಪಿ ಮೈತ್ರಿ ಮುಂದುವರಿಸಲು ಕೆಲವು ದಿನ­ಗಳಿಂದ ನಡೆದ ಪ್ರಯತ್ನ ಫಲ ನೀಡಲಿಲ್ಲ. ಸೀಟು­ಗಳ ಹಂಚಿಕೆ ವಿಷಯದಲ್ಲಿ ಎಲ್ಲ ಪಕ್ಷಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಮೈತ್ರಿ ಮುರಿದು ಬಿದ್ದಿದೆ. ಕಳೆದ ಕೆಲವು ವರ್ಷಗಳಿಂದ ಒಗ್ಗೂಡಿ ಚುನಾವಣೆ ಎದುರಿಸಿದ್ದ ಮಿತ್ರ ಪಕ್ಷಗಳು ಈಗ ‘ಚುನಾವಣಾ ಅಖಾಡ’ ದಲ್ಲಿ ಮುಖಾಮುಖಿ ಆಗಲಿವೆ.

ಮೂರು ದಶಕಗಳ ಬಳಿಕ ಬಿಜೆಪಿ– ಶಿವಸೇನಾ ಪ್ರತ್ಯೇಕ ದಾರಿ ತುಳಿದಿವೆ. ‘ಶಿವಸೇನಾ ಜತೆಗಿನ ಮೈತ್ರಿ ಮುಗಿದ ಅಧ್ಯಾಯ’ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡನ್ವೀಸ್‌ ಗುರುವಾರ ಅಧಿಕೃತವಾಗಿ ಪ್ರಕಟಿಸಿ­ದರು. ಆದರೆ, ಶಿವಸೇನೆ­ಯಿಂದ ಅಧಿಕೃತ ಹೇಳಿಕೆ ಹೊರಬಂದಿಲ್ಲ.  ಬಿಜೆ­ಪಿಯ ಹಿರಿಯ ನಾಯಕರು ಮಾತುಕತೆಗೆ ನಿರಾ­ಸಕ್ತಿ ತೋರಿದ್ದರಿಂದ ಮೈತ್ರಿ ಮುರಿದು ಬಿತ್ತು ಎಂದು ಶಿವಸೇನಾ ನಾಯಕರು ದೂರಿದ್ದಾರೆ.

‘ಮೈತ್ರಿ ಮುರಿದು ಬಿದ್ದಿರುವುದರಿಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಶಿವಸೇನಾ ಮುಂದುವ­ರಿಯುವುದೇ?’ ಎನ್ನುವ ಅನು­ಮಾನ ತಲೆದೋರಿದೆ. ಕೈಗಾರಿಕಾ ಸಚಿವ ಅನಂತಗೀತೆ ಶಿವಸೇನಾ ಪ್ರತಿನಿಧಿಸಿದ್ದಾರೆ. ‘ರಾಜ್ಯದಲ್ಲಿ ಮೈತ್ರಿ ಏರ್ಪಡದಿದ್ದರೂ, ಕೇಂದ್ರದಲ್ಲಿ ಉಭಯ ಪಕ್ಷಗಳ ಸಂಬಂಧ ಮುಂದುವರಿ­ಯ­ಲಿದೆ. ನಾವು ಒಗ್ಗೂಡಿ ಲೋಕಸಭೆ ಚುನಾವಣೆ ಎದುರಿಸಿ­ದ್ದೇವೆ’ ಎಂದು ಅನಂತಗೀತೆ ಪತ್ರಿಕಾ ಗೋಷ್ಠಿ­­ಯಲ್ಲಿ ಇದಕ್ಕೂ ಮೊದಲು ತಿಳಿಸಿದ್ದರು.

ಶಿವಸೇನಾ ಎನ್‌ಡಿಎ ಭಾಗವಾಗಿ­ರುವುದರಿಂದ ತಾವು ಈ ಹಂತದಲ್ಲಿ ರಾಜೀನಾಮೆ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಒಂದು ಹಂತದಲ್ಲಿ ಬಿಜೆಪಿ ಹಾಗೂ ಶಿವಸೇನಾ ನಡುವೆ ಸೀಟು ಹಂಚಿಕೆ ಹೊಂದಾಣಿಕೆ ಏರ್ಪ­ಟ್ಟಿತ್ತು. 130 ಸ್ಥಾನಗಳನ್ನು ಬಿಜೆಪಿಗೆ ಬಿಡ­ಲಾಯಿತು. 151 ಸ್ಥಾನಗಳಲ್ಲಿ ಸ್ಪರ್ಧಿಸಲು ಶಿವ­ಸೇನಾ ಉದ್ದೇಶಿಸಿತು. ಉಳಿದ ಏಳು ಸ್ಥಾನಗಳನ್ನು ನಾಲ್ಕು ಸಣ್ಣಪುಟ್ಟ ಮಿತ್ರಪಕ್ಷಗಳಿಗೆ ಬಿಡಲು ಒಪ್ಪಿತು. ಆದರೆ, ಶೇತ್ಕರಿ ಸಂಘಟನೆ, ಆರ್‌ಪಿಐ ಮತ್ತಿ­ತರ ಪಕ್ಷಗಳು ತಮಗೆ 18 ಸ್ಥಾನ ಕೊಡ­ಬೇಕೆಂದು ಪಟ್ಟು ಹಿಡಿದವು. ಇದಕ್ಕೆ ಶಿವಸೇನಾ ಸಮ್ಮತಿಸಲಿಲ್ಲ. ಹೀಗಾಗಿ ಮೈತ್ರಿ ಮುರಿದು ಬಿದ್ದಿದೆ.

ಮೊದಲಿಗೆ ಬಿಜೆಪಿಗೆ 119 ಸ್ಥಾನಗಳನ್ನು ಮಾತ್ರ ಬಿಡುವುದಾಗಿ ಶಿವಸೇನಾ ಹಟ ಹಿಡಿದಿತ್ತು. ಈ ಹಂತದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ 130 ಕ್ಷೇತ್ರಗಳನ್ನು ಕೊಡಬೇಕು ಎನ್ನುವ ಹೊಸ ಪ್ರಸ್ತಾವನೆ ಕಳುಹಿಸಿದರು. ಅದಕ್ಕೆ ಶಿವಸೇನಾ ಸಮ್ಮತಿ­ಸಿತು. ವಿಧಾನ ಪರಿಷತ್‌ ಹಾಗೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಗಳಲ್ಲಿ ಸಣ್ಣಪುಟ್ಟ ಪಕ್ಷಗಳಿಗೆ ಹೆಚ್ಚು ಪ್ರಾತಿನಿಧ್ಯ ಕೊಡುವುದಾಗಿ ಶಿವಸೇನಾ ಭರವಸೆ ನೀಡಿತ್ತು. ಇದು ಸಣ್ಣಪುಟ್ಟ ಪಕ್ಷಗಳಿಗೆ ಒಪ್ಪಿಗೆಯಾಗಲಿಲ್ಲ. ಎರಡೂ ಪಕ್ಷಗಳು ಒಟ್ಟು ನಾಲ್ಕು ಸೂತ್ರಗಳನ್ನು ಚರ್ಚಿಸಿದರೂ ಯಾವುದೂ ಅಂತಿಮಗೊಳ್ಳಲಿಲ್ಲ.

ಮೋದಿ ನೇತೃತ್ವದಲ್ಲಿ ಲೋಕ­ಸಭೆ ಚುನಾವಣೆ ಗೆದ್ದ ಬಳಿಕ ಬಿಜೆಪಿ ಕೈ ಮೇಲಾಗಿದೆ. ಶಿವಸೇನಾ ಸರ್ವೋಚ್ಚ ನಾಯಕ ಬಾಳಾ ಠಾಕ್ರೆ ಅವರ ನಿಧನದ ಬಳಿಕ ದುರ್ಬಲ­ವಾದಂತೆ ಕಾಣು­ತ್ತಿದೆ. ಬಾಳಾ ಸಾಹೇಬ್‌ಗೆ ಮಹಾರಾಷ್ಟ್ರದ ಮೇಲಿದ್ದ ಪ್ರಭಾವ ಹಿಡಿತ ಅವರ ಪುತ್ರ ಉದ್ಧವ್‌ ಠಾಕ್ರೆ ಅವರಿಗೆ ಇಲ್ಲ. ಇದರ ಅರಿವು ಬಿಜೆಪಿಗಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸ­ಲಾ­ಗು­ತ್ತಿದೆ.

1984ರಲ್ಲಿ ಮೊದಲ ಬಾರಿಗೆ ಬಿಜೆಪಿ ಮತ್ತು ಶಿವಸೇನಾ ಒಟ್ಟಾಗಿ ಮಹಾ­ರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸಿದ್ದವು. 1995ರಲ್ಲಿ ರಾಜ್ಯ­ದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದವು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿದೆ. ಶಿವಸೇನಾ 22 ಸ್ಥಾನಗಳನ್ನು ಪಡೆದಿದೆ. ಶಿವಸೇನಾದ ಒಬ್ಬರಿಗೆ ಮಾತ್ರ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಮೈತ್ರಿ ಮುರಿದು ಬಿದ್ದಿರುವುದಕ್ಕೆ ಉಭಯ ಪಕ್ಷಗಳು ಪರಸ್ಪರ ದೂಷಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.