ADVERTISEMENT

ಮೆಮನ್‌ ಗಲ್ಲು ಖಚಿತ

ಕೊನೆಯ ಗಳಿಗೆಯಲ್ಲಿ ಮತ್ತೆ ರಾಷ್ಟ್ರಪತಿಗೆ ಮೊರೆ: ಅರ್ಜಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 20:46 IST
Last Updated 29 ಜುಲೈ 2015, 20:46 IST

ನವದೆಹಲಿ: 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್‌ ಮೆಮನ್‌ನನ್ನು ಟಾಡಾ ಕೋರ್ಟ್‌ ಆದೇಶದಂತೆ ಗುರುವಾರ (ಜುಲೈ 30) ಬೆಳಿಗ್ಗೆ  7 ಗಂಟೆಗೆ ಗಲ್ಲಿಗೆ ಏರಿಸುವುದು ಮಧ್ಯರಾತ್ರಿ ಬೆಳವಣಿಗೆಯನ್ನು ಅವಲಂಬಿಸಿದೆ.

ಗಲ್ಲು ಶಿಕ್ಷೆ ತಡೆಯುವಂತೆ  ಬುಧವಾರ ಸಂಜೆ ಆತ ಮಾಡಿಕೊಂಡಿದ್ದ ಮನವಿಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ತಡರಾತ್ರಿ ತಿರಸ್ಕರಿಸಿದರು. ಇದಕ್ಕೂ  ಮುನ್ನ, ಸುಪ್ರೀಂಕೋರ್ಟ್‌ನ ತ್ರಿಸದಸ್ಯ  ಪೀಠವು ಆತನ  ಗಲ್ಲು ಶಿಕ್ಷೆಯನ್ನು ತಡೆಯಲು ನಿರಾಕರಿಸಿ, ಟಾಡಾ ಕೋರ್ಟ್‌್ ಆದೇಶವನ್ನು  ಎತ್ತಿಹಿಡಿದಿತ್ತು.

ಯಾಕೂಬ್‌ ಪರ ವಕೀಲರು ಆತನನ್ನು ಗಲ್ಲಿನಿಂದ ಪಾರು ಮಾಡಲು ಅಂತಿಮ ಪ್ರಯತ್ನಗಳನ್ನು ನಡೆಸಿದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಗೃಹ ಕಾರ್ಯದರ್ಶಿ ಎಲ್‌.ಸಿ. ಗೋಯಲ್‌ ಮತ್ತು ಸಾಲಿಸಿಟರ್‌ ಜನರಲ್‌ ರಂಜಿತ್‌ ಕುಮಾರ್‌ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರಾಷ್ಟ್ರಪತಿ ಪ್ರಣವ್ ಅವರು, ಯಾಕೂಬ್ ಅರ್ಜಿಯನ್ನು ತಿರಸ್ಕರಿಸಲು ನಿರ್ಧರಿಸಿದರು. ಇದರಿಂದ ತನ್ನ ಜನ್ಮದಿನದಂದೇ ಯಾಕೂಬ್‌ ಮೆಮನ್ ನೇಣಿಗೆ ಏರುವಂತಾಗುವುದು.

‘ಮುಂಬೈ ಸರಣಿ ಸ್ಫೋಟದ ಅಪರಾಧಿಯ ಗಲ್ಲು ಶಿಕ್ಷೆ ತಡೆಯಲು ಯಾವುದೇ ಸಕಾರಣಗಳು ಇಲ್ಲದಿರುವುದರಿಂದ ಅರ್ಜಿಯನ್ನು  ತಿರಸ್ಕರಿಸಲಾಗಿದೆ’ ಎಂದು ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ, ಪ್ರಫುಲ್ಲ ಚಂದ್ರ ಪಂತ್‌ ಹಾಗೂ ಅಮಿತವ ರಾಯ್‌ ಅವರನ್ನು ಒಳಗೊಂಡ  ಪೀಠವು ಹೇಳಿತು.

ನ್ಯಾಯಪೀಠವು ಯಾಕೂಬ್‌ ಮೆಮನ್‌‌ ಅರ್ಜಿಯನ್ನು ತಿರಸ್ಕರಿಸುತ್ತಿದ್ದಂತೆ, ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ ರಾವ್‌  ಅವರು, ಕಳೆದ ವಾರ  ಕ್ಷಮಾದಾನ ಕೋರಿ ಯಾಕೂಬ್‌ ಸಲ್ಲಿಸಿದ್ದ ಅರ್ಜಿಯನ್ನೂ ತಿರಸ್ಕರಿಸಿದರು.

‘ಯಾಕೂಬ್‌ ಮೆಮನ್‌, ಕಾನೂನಿನಡಿ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡಿದ್ದಾನೆ. ಗಲ್ಲು ಶಿಕ್ಷೆ ಜಾರಿ ವಾರಂಟ್‌ ಹೊರಡಿಸಿದ ಬಳಿಕ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದ್ದಾನೆ. ಜುಲೈ 21ರಂದು ಅರ್ಜಿ ವಜಾ ಆಗಿದೆ’ ಎಂದು ಮಿಶ್ರಾ ನೇತೃತ್ವದ ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿತು.
 

ಮಧ್ಯ ರಾತ್ರಿಯೂ ಕಸರತ್ತು
ತಡರಾತ್ರಿಯ ಬೆಳವಣಿಗೆಯಲ್ಲಿ,  ಸುಪ್ರೀಂಕೋರ್ಟ್‌ ಮಾರ್ಗಸೂಚಿಯಲ್ಲಿನ ಅವಕಾಶಗಳ ಅಡಿಯಲ್ಲಿ ಯಾಕೂಬ್‌ ಗಲ್ಲುಶಿಕ್ಷೆ ಜಾರಿಯನ್ನು 14 ದಿನಗಳವರೆಗೆ ತಡೆಹಿಡಿಯಲು ಯಾಕೂಬ್ ಪರ ವಕೀಲರು ಪ್ರಯತ್ನ ನಡೆಸಿದರು. ಇದಕ್ಕಾಗಿ ವಕೀಲ ಪ್ರಶಾಂತ್ ಭೂಷಣ್‌ ಮತ್ತು ಮೂವರು ಹಿರಿಯ ವಕೀಲರು ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಅವರ ಮನೆಗೆ ತೆರಳಿ ಸಮಾಲೋಚನೆ ನಡೆಸಿದರು. ಈ ಸಂಬಂಧ ಸುಪ್ರೀಂಕೋರ್ಟ್‌ ರಿಜಿಸ್ಟ್ರಾರ್‌ ಅವರು ಬುಧವಾರ ಮಧ್ಯರಾತ್ರಿ ಸಿಜೆಐ ಅವರನ್ನು ಭೇಟಿಯಾಗಿ ಯಾಕೂಬ್‌ ಅರ್ಜಿಯ ಪ್ರತಿಯನ್ನು ನೀಡಿದರು.  ಆನಂತರ ಸಿಜೆಐ 2.30ರ ಸಮಯಕ್ಕೆ ವಿಚಾರಣೆಗೆ ಅನುಮತಿ ನೀಡಿದರು. ಈ ಕಾರಣ ಗಲ್ಲು ಜಾರಿಗೆ 5 ತಾಸು ಬಾಕಿ ಇರುವಂತೆಯೇ ಮೂವರು ನ್ಯಾಯಮೂರ್ತಿಗಳ ಪೀಠ ಮತ್ತೆ ಪ್ರಕರಣದ ವಿಚಾರಣೆ ನಡೆಸಿದೆ.

‘ಅಪರಾಧಿ ಈ ಮೊದಲು ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಪೀಠ ವಜಾ ಮಾಡಿದ ಕ್ರಮವೂ ಸರಿಯಾಗಿದೆ’ ಎಂದೂ  ಅಭಿಪ್ರಾಯಪಟ್ಟಿತು.

‘ರಾಷ್ಟ್ರಪತಿ ಮುಂದೆ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಸೇರಿದಂತೆ ತನಗೆ ನೀಡಲಾಗಿರುವ ಗಲ್ಲು ಶಿಕ್ಷೆಯ ವಿರುದ್ಧ  ಕಾನೂನು ಹೋರಾಟ ನಡೆಸಲು ಇನ್ನೂ ಅವಕಾಶವಿದೆ’ ಎಂಬ ಯಾಕೂಬ್‌ ಮೆಮನ್‌‌ ವಾದವನ್ನು ನ್ಯಾಯಪೀಠವು ತಳ್ಳಿಹಾಕಿತು.

‘2014ರ ಏಪ್ರಿಲ್‌ 11ರಂದು ಮೆಮನ್‌‌ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು. ಮೇ 26ರಂದು ಯಾಕೂಬ್‌ಗೆ ಈ ವಿಷಯ ತಿಳಿಸಲಾಗಿದೆ. ಕ್ಷಮಾದಾನದ ಅರ್ಜಿ ತಿರಸ್ಕರಿಸಿದ ನಿರ್ಧಾರವನ್ನು ಆತ ಪ್ರಶ್ನಿಸಿಲ್ಲ. ಜುಲೈ 22ರಂದು ಸುಪ್ರೀಂಕೋರ್ಟ್‌ ಪರಿಹಾರಾತ್ಮಕ ಅರ್ಜಿ ತಿರಸ್ಕರಿಸಿದ ಬಳಿಕ ಕ್ಷಮಾದಾನ ಕೋರಿ ಎರಡನೇ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಸಂಗತಿ ನಮಗೆ ಸಂಬಂಧಪಟ್ಟಿಲ್ಲ’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.

ಅಪರಾಧಿಯ ವಾದ ಒಪ್ಪಿಕೊಳ್ಳದ ಪೀಠ
‘ಗಲ್ಲು ಶಿಕ್ಷೆ ಜಾರಿಗೆ ವಾರಂಟ್‌ ಹೊರಡಿಸುವ ಮುನ್ನ ತನ್ನ ವಾದ ಕೇಳಿಲ್ಲ. ಅಲ್ಲದೆ, ಗಲ್ಲು ಶಿಕ್ಷೆ ಜಾರಿ ದಿನಾಂಕ ತಿಳಿಸುವ ಸಮಯದಲ್ಲಿ ಕಡ್ಡಾಯವಾಗಿರುವ ಹದಿನಾಲ್ಕು ದಿನಗಳ ಕಾಲಾವಕಾಶ ನೀಡಿಲ್ಲ’ ಎಂಬ ಅಪರಾಧಿಯ ವಾದವನ್ನು ಕೋರ್ಟ್‌ ಒಪ್ಪಿಕೊಳ್ಳಲಿಲ್ಲ.

ADVERTISEMENT

ನ್ಯಾಯಮೂರ್ತಿಗಳಾದ ಎ.ಆರ್. ದವೆ ಹಾಗೂ  ಕುರಿಯನ್‌ ಜೋಸೆಫ್‌ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠವು ಮಂಗಳವಾರ ಯಾಕೂಬ್‌ ಮೆಮನ್‌ ಅರ್ಜಿ ಸಂಬಂಧ ವಿಭಿನ್ನ ತೀರ್ಪು ನೀಡಿದ್ದರಿಂದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದಲ್ಲಿ ವಿಸ್ತೃತ ಪೀಠ ರಚಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಎಚ್‌. ಎಲ್‌. ದತ್ತು ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಜುಲೈ 21ರಂದು ಯಾಕೂಬ್‌ ಮೆಮನ್‌‌ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ವಜಾ ಮಾಡಿತ್ತು. ಅಪರಾಧಿ ಪರಿಹಾರ ಕೇಳಲು ನೀಡಿರುವ ಕಾರಣಗಳು ಸುಪ್ರೀಂ ಕೋರ್ಟ್‌ 2002ರಲ್ಲಿ ನೀಡಿರುವ ನಿಯಮಗಳ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದೂ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಆಗ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.