ADVERTISEMENT

ಮೇಕೆದಾಟು: ನ್ಯಾಯಮಂಡಳಿ ತೀರ್ಪಿಗೆ ಬದ್ಧ

ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2015, 19:29 IST
Last Updated 1 ಜುಲೈ 2015, 19:29 IST

ಚೆನ್ನೈ (ಪಿಟಿಐ): ಮೇಕೆದಾಟು ಬಳಿ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಿಸುವ ಕರ್ನಾಟಕ ಸರ್ಕಾರದ ಪ್ರಸ್ತಾಪವನ್ನು ಕಾವೇರಿ ನ್ಯಾಯಮಂಡಳಿ ತೀರ್ಪಿಗೆ ಅನ್ವಯವಾಗಿ ಪರಿಶೀಲಿಸಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಸರ್ಕಾರ ಈ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಕಳುಹಿಸಿದಾಗ  ಕಾವೇರಿ ನ್ಯಾಯಮಂಡಳಿ ತೀರ್ಪಿನ 13ನೇ ಷರತ್ತಿಗೆ ಅನುಗುಣವಾಗಿ ಈ ಯೋಜನೆಯನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಉಮಾಭಾರತಿ ತಿಳಿಸಿದ್ದಾರೆ. ಪಿಎಂಕೆ ಸಂಸದ ಅನ್ಬುಮಣಿ ರಾಮದಾಸ್‌ ಅವರಿಗೆ ಬರೆದಿರುವ ಪತ್ರದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

ಮೇಕೆದಾಟು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಎ. ರಾಮದಾಸ್‌ ಉಮಾಭಾರತಿ ಅವರಿಗೆ ಪತ್ರ ಬರೆದಿದ್ದರು.  ಈ ಕುರಿತು ಸಂಸತ್ತಿನಲ್ಲಿಯೂ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಕರ್ನಾಟಕ ವಿದ್ಯುತ್‌ ನಿಗಮವು ಕೇಂದ್ರ ಜಲ ಆಯೋಗಕ್ಕೆ   2014ರ ಫೆಬ್ರುವರಿಯಲ್ಲಿ ಶಿವನಸಮುದ್ರ ವಿದ್ಯುತ್‌ ಉತ್ಪಾದನೆ ಯೋಜನೆಯ ವಿಸ್ತೃತ ವರದಿಯನ್ನು ಮಾತ್ರ ಕಳುಹಿಸಿದೆ. ‘ಕಾವೇರಿ ಕಣಿವೆಯ ಕೆಳಹಂತದ ರಾಜ್ಯಗಳಾದ ತಮಿಳುನಾಡು ಮತ್ತು ಪುದುಚೇರಿಗಳ ಪ್ರತಿಕ್ರಿಯೆ ಪಡೆಯುವಂತೆ ಈ ವರದಿಯನ್ನು ಕರ್ನಾಟಕಕ್ಕೆ ಹಿಂದಿರುಗಿಸಲಾಗಿದೆ.

‘ಅಲ್ಲದೇ ಸುಪ್ರೀಂಕೋರ್ಟ್‌ಗೆ ತಿಳಿಸದೇ ಯೋಜನೆ ನಿರ್ಮಿಸುವುದಿಲ್ಲ ಎಂದೂ ಕರ್ನಾಟಕ ತಿಳಿಸಿದೆ. ಕಾವೇರಿ ನಿರ್ವಹಣಾ ಮಂಡಳಿಗೆ ಸಂಬಂಧಿಸಿದಂತೆ ಉಭಯ ರಾಜ್ಯಗಳು ವಿಭಿನ್ನ ನಿಲುವು ತಳೆದಿವೆ. ಹಾಗಾಗಿ ನ್ಯಾಯಮಂಡಳಿ ತೀರ್ಪು ಜಾರಿಗೆ ಹಂಗಾಮಿ ಸಮಿತಿ ರಚಿಸಲಾಗಿದೆ’ ಎಂದು ಉಮಾಭಾರತಿ ತಿಳಿಸಿದ್ದಾರೆ.

2007ರ ಫೆಬ್ರುವರಿ 5ರಂದು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಬಂದಿತ್ತು. ‘ರಾಜಕೀಯ ದುರುದ್ದೇಶದಿಂದ ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ.

‘ಈ ಯೋಜನೆಯಿಂದ ಮಳೆಗಾಲದಲ್ಲಿ 30ರಿಂದ 35 ಟಿಎಂಸಿ ನೀರು ಸಂಗ್ರಹಿಸಬಹುದಾಗಿದ್ದು, ಬೆಂಗಳೂರು ನಗರ ಹಾಗೂ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಪೂರೈಸಲು ಬಳಸಿಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೆ ಮೇಕೆದಾಟು ಯೋಜನೆ ನಿಲ್ಲಿಸುವುದಿಲ್ಲ’ ಎಂದು ಕರ್ನಾಟಕ ಹೇಳಿದೆ.
*
13ನೇ ಷರತ್ತು ಏನು?
ಜಲವಿದ್ಯುತ್‌ ಯೋಜನೆಗಾಗಿ ಜಲಾಶಯದಲ್ಲಿ ನೀರು ಸಂಗ್ರಹಿಸಿದಾಗ, ತೀರ್ಪಿನ ಅನ್ವಯ ಕಾಲಕಾಲಕ್ಕೆ ಕೆಳಗಿನ ಭಾಗಕ್ಕೆ ನೀರು ಬಿಡಲೇಬೇಕು. ಯಾವುದೇ ಕಾರಣಕ್ಕೆ ಕೃಷಿ ಕೆಲಸಕ್ಕೆ ತೊಂದರೆಯಾಗಬಾರದು ಎಂದು ನ್ಯಾಯಮಂಡಳಿ ತೀರ್ಪಿನ 13ನೇ ಷರತ್ತು ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.