ADVERTISEMENT

ಮೇಘ ಸ್ಫೋಟ: ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 19:30 IST
Last Updated 25 ಜುಲೈ 2015, 19:30 IST

ಶ್ರೀನಗರ: ಗಂಧೇರ್ಬಲ್ ಜಿಲ್ಲೆಯಲ್ಲಿರುವ ಅಮರನಾಥ ಯಾತ್ರೆಯ ಬಲ್ತಾಲ್ ಮೂಲ ಶಿಬಿರದ ಬಳಿ ಶುಕ್ರವಾರ ರಾತ್ರಿ ಮೇಘ ಸ್ಫೋಟದಿಂದ ಯಾತ್ರಿಕರಲ್ಲಿ ಒಬ್ಬ ಬಾಲಕ ಮತ್ತು ಬಾಲಕಿ ಸೇರಿದಂತೆ ಮೂವರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ.  ಮೇಘಸ್ಫೋಟದಿಂದ ಶಿಬಿರದ ಕೆಲವು ಡೇರೆಗಳೊಳಕ್ಕೆ ನೀರು ನುಗ್ಗಿತು. ಅನೇಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.  11 ಜನ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು  ತಿಳಿಸಿವೆ.

ಪ್ರತಿಭಟನೆ: ಜಿಲ್ಲಾ ಕೇಂದ್ರ ರಜೌರಿ ಪಟ್ಟಣದಲ್ಲಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ (ಐಎಸ್ಐಎಸ್)ನ ಧ್ವಜವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಕಾರ್ಯಕರ್ತರು ಈಚೆಗೆ ಸುಟ್ಟಿರುವುದನ್ನು ಖಂಡಿಸಿ ಅಲ್ಲಿನ ಮುಸ್ಲಿಮರು ನಡೆಸಿದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಕಾಶ್ಮೀರ ಕಣಿವೆಯಲ್ಲಿ ಶನಿವಾರ ಬಂದ್ ಆಚರಿಸಲಾಯಿತು.

ಹಳೆಯ ಶ್ರೀನಗರ ಪ್ರದೇಶದಲ್ಲಿ ಮುಖ್ಯವಾಗಿ ಲಾಲ್‌ಚೌಕ್‌ ಮತ್ತು ಇತರ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕುರಾನ್‌ನ ಬರಹಗಳಿರುವ ಆ ಧ್ವಜವನ್ನು ಸುಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಕೆಲವು  ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಇದಕ್ಕೆ ಜಮ್ಮು–ಕಾಶ್ಮೀರ ವಿಮೋಚನಾ ರಂಗ ಮತ್ತು ವರ್ತಕರ ಸಂಘಟನೆಗಳು ಬೆಂಬಲ ಸೂಚಿಸಿದ್ದವು.

ಗ್ರೆನೆಡ್‌ ದಾಳಿಗೆ ಒಬ್ಬ ಬಲಿ:  ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅಚಬಲ್ ಪ್ರದೇಶದಲ್ಲಿ ಬಸ್ ನಿಲ್ದಾಣದ ಬಳಿ ಶಂಕಿತ ಉಗ್ರಗಾಮಿ ಶನಿವಾರ ನಡೆಸಿದ ಗ್ರೆನೆಡ್ ದಾಳಿಯಲ್ಲಿ  ಒಬ್ಬರು ಮೃತಪಟ್ಟಿದ್ದಾರೆ. ನಾಲ್ವರು ನಾಗರಿಕರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಒಬ್ಬ ಯೋಧ ಗಾಯಗೊಂಡಿದ್ದಾರೆ. ಉಗ್ರಗಾಮಿಯ ಗುರಿ ಸಿಆರ್‌ಪಿಎಫ್ ತಂಡವೇ ಆಗಿತ್ತು. ಆದರೆ ಗ್ರೆನೆಡ್ ಗುರಿ ತಪ್ಪಿ ಬಸ್‌್ ನಿಲ್ದಾಣದ ಬಳಿ ರಸ್ತೆಯಲ್ಲಿ ಸಿಡಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.