ADVERTISEMENT

ಮೇಲ್ಜಾತಿ ಬಡವರಿಗೂ ಮೀಸಲಾತಿ

ಗುಜರಾತ್‌: ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಅವಕಾಶ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST
-ಆನಂದಿ ಬೆನ್, ಗುಜರಾತ್ ಮುಖ್ಯಮಂತ್ರಿ
-ಆನಂದಿ ಬೆನ್, ಗುಜರಾತ್ ಮುಖ್ಯಮಂತ್ರಿ   

ಅಹಮದಾಬಾದ್ (ಪಿಟಿಐ): ಮೀಸಲಾತಿ ವ್ಯಾಪ್ತಿಗೆ ಒಳಪಡದ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ10ರಷ್ಟು ಮೀಸಲಾತಿ ಕಲ್ಪಿಸಲು ಗುಜರಾತ್‌ ಸರ್ಕಾರ ಮುಂದಾಗಿದೆ.

ವಾರ್ಷಿಕ ₹ 6 ಲಕ್ಷ ಮತ್ತು ಅದಕ್ಕಿಂತಲೂ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಸದಸ್ಯರಿಗೆ ಈ ಮೀಸಲಾತಿ ದೊರೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿಜಯ್ ರೂಪಾನಿ, ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಮತ್ತು ಹಲವು ಸಚಿವರ ನಡುವೆ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಟೇಲ್ ಸಮುದಾಯವನ್ನು ಸಮಾಧಾನಪಡಿಸುವ ಹಾಗೂ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಈ ಸಂಬಂಧ ಮೇ 1ರಂದು ಸುತ್ತೋಲೆ ಹೊರಡಿಸಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮೀಸಲಾತಿ ಅನ್ವಯವಾಗಲಿದೆ  ಎಂದು ವಿಜಯ್ ರೂಪಾನಿ ತಿಳಿಸಿದ್ದಾರೆ.

ಒಟ್ಟು ಮೀಸಲಾತಿ  ಪ್ರಮಾಣ ಶೇ 50ರಷ್ಟನ್ನು ಮೀರಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಗುಜರಾತ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಈಗಾಗಲೆ ಶೇ 50 ಮೀಸಲಾತಿ ನೀಡಲಾಗಿದೆ.

ಈಗ ಹೆಚ್ಚುವರಿಯಾಗಿ ಶೇ 10ರಷ್ಟು ಮೀಸಲಾತಿ ಘೋಷಿಸಿರುವುದು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ. ಆದರೆ ಪರಿಸ್ಥಿತಿ ತೀರಾ ಗಂಭೀರವಾಗಿದೆ   ಎಂಬುದನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ. ಅಗತ್ಯ ಬಿದ್ದಲ್ಲಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ರೂಪಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.