ADVERTISEMENT

ಮೋಗಾ ಪ್ರಕರಣ: ವರದಿ ನೀಡಲು ಹೈಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಮೇ 2015, 7:42 IST
Last Updated 7 ಮೇ 2015, 7:42 IST

ಚಂಡೀಗಡ(ಪಿಟಿಐ): ಮೋಗಾದಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ತಾಯಿ– ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಹತ್ಯೆ ಪ್ರಕರಣ ಸಂಬಂಧ ಬಸ್ ನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ವರದಿ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪಂಜಾಬ್ ಸರ್ಕಾರಕ್ಕೆ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಲಿಸಾ ಗಿಲ್ ಅವರು, ಪ್ರಕರಣ ಸಂಬಂಧ ಮೇ 15ರೊಳಗೆ ಪ್ರತಿಕ್ರಿಯೆ ನೀಡುವಂತೆ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಹಾಗೂ ರಾಜ್ಯ ರಸ್ತೆ ಸಾರಿಗೆ ಆಯುಕ್ತರು, ಆರ್ಬಿಟ್ ಸಂಸ್ಥೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಸಂಬಂಧಿಕರಿಗೆ ಸೇರಿದ ಆರ್ಬಿಟ್ ಒಡೆತನದ ಬಸ್‌ನ ಚಾಲಕ, ನಿರ್ವಾಹಕ ಹಾಗೂ ಇತರೆ ಸಿಬ್ಬಂದಿ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ವಿವರವಾದ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಜತೆಗೆ, ರಾಜ್ಯ ರಸ್ತೆ ಸಾರಿಗೆ ಬಸ್ ಗಳ ಮಾಹಿತಿ ಮತ್ತು ಖಾಸಗಿ ಬಸ್ ಸಂಸ್ಥೆಗಳು, ಅವುಗಳು ಹೊಂದಿರುವ ಬಸ್ ಸಂಖ್ಯೆಗಳ ವಿವರಗಳನ್ನು ನೀಡುವಂತೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.