ADVERTISEMENT

‘ಮೋದಿಗೆ ಇತಿಹಾಸ ಪಾಠ ಮಾಡಿ’

ಪಿಟಿಐ
Published 24 ಸೆಪ್ಟೆಂಬರ್ 2017, 19:48 IST
Last Updated 24 ಸೆಪ್ಟೆಂಬರ್ 2017, 19:48 IST

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ವಿಶ್ವಸಂಸ್ಥೆಯಲ್ಲಿ ಮಾಡಿರುವ ಭಾಷಣಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ರಾಷ್ಟ್ರದ ಅಭಿವೃದ್ಧಿಯಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳು ನೀಡಿದ ಕೊಡುಗೆಗಳನ್ನು ಸಚಿವರು ಗುರುತಿಸಿದ್ದಾರೆ ಎಂದು ಹೇಳಿದೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತಿಹಾಸದ ಪಾಠ ಮಾಡುವಂತೆಯೂ ಸುಷ್ಮಾ ಅವರನ್ನು ಅದು ಕೇಳಿಕೊಂಡಿದೆ.

‘ಸುಷ್ಮಾ ಅವರೇ, ಐಐಟಿ, ಐಐಎಂಗಳನ್ನು ಸ್ಥಾಪಿಸುವ ಮೂಲಕ ಕಾಂಗ್ರೆಸ್‌ ಸರ್ಕಾರಗಳು ರೂಪಿಸಿದ್ದ ಅಸಾಧಾರಣ ಮುನ್ನೋಟ ಮತ್ತು ಪರಂಪರೆಯನ್ನು ಕೊನೆಗೂ ಗುರುತಿಸಿದ್ದಕ್ಕೆ ಧನ್ಯವಾದಗಳು’ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಇದಕ್ಕೂ ಮೊದಲು ಮಾತನಾಡಿದ್ದ ಕಾಂಗ್ರೆಸ್‌ ಮುಖ್ಯ ವಕ್ತಾರ, ರಣದೀಪ್‌ ಸಿಂಗ್‌ ಸುರ್ಜೆವಾಲಾ, ‘ಕಳೆದ 70 ವರ್ಷಗಳಲ್ಲಿ ಏನಾಗಿದೆ ಎಂದು
ಕೇಳುವವರಿಗೆಲ್ಲ ಸುಷ್ಮಾ ಅವರ ಭಾಷಣ ತಕ್ಕ ಪ್ರತ್ಯುತ್ತರ’ ಎಂದು ಹೇಳಿದ್ದರು.

2014ರ ಲೋಕಸಭಾ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದ ಸಮಯ
ದಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಲ್ಲ ಭಾಷಣಗಳಲ್ಲಿ, ಕಾಂಗ್ರೆಸ್‌ ಪಕ್ಷವು 60 ವರ್ಷಗಳಿಂದಲೂ ದುರಾಡಳಿತ ನಡೆಸುತ್ತಾ ಬಂದಿದೆ ಎಂದೇ ಹೇಳುತ್ತಿದ್ದಾರೆ.

ಇಂತಹ ಟೀಕೆ ಬಂದಾಗಲೆಲ್ಲ, 70 ವರ್ಷಗಳಲ್ಲಿ ಪಕ್ಷದ ಸರ್ಕಾರಗಳು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯ
ಗಳನ್ನು ಕಾಂಗ್ರೆಸ್‌ ಮುಖಂಡರು ವಿವರಿಸುತ್ತಲೇ ಇದ್ದರು.

ಪಾಠ ಮಾಡಿ: ‘ವಿದೇಶಾಂಗ ವ್ಯವಹಾರಗಳ ಸಚಿವೆ ಸ್ವಷ್ಮಾ ಸ್ವರಾಜ್‌ ಅವರು ತುಂಬಾ ಓದಿದವರು. ಪ್ರಧಾನಿ ಅವರಿಗೆ ಪಾಠ ಮಾಡುವಷ್ಟು ಸಾಮರ್ಥ್ಯ ಅವರಿಗಿದೆ ಎಂಬುದು ನಮಗೆ ಸಂತೋಷ ತಂದಿದೆ. ಮೋದಿ ಅವರು ಇತಿಹಾಸದ ಪುಸ್ತಕಗಳನ್ನು ಓದಿದ್ದರೆ, ಐಐಟಿ, ಐಐಎಂಗಳು, ಇಸ್ರೊ, ಹಸಿರು ಕ್ರಾಂತಿ ಸೇರಿದಂತೆ ಕಾಂಗ್ರೆಸ್‌ ಸರ್ಕಾರಗಳ ಎಲ್ಲ ಕೊಡುಗೆಗಳ ಬಗ್ಗೆ ಗೊತ್ತಿರುತ್ತಿತ್ತು’ ಎಂದು ಎಐಸಿಸಿ ವಕ್ತಾರ ಅಜಯ್‌ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.