ADVERTISEMENT

ಮೋದಿಗೆ ‘ಸಾಮ್ನಾ’ ತಿರುಗೇಟು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2014, 9:50 IST
Last Updated 6 ಅಕ್ಟೋಬರ್ 2014, 9:50 IST

ಮುಂಬೈ (ಐಎಎನ್‌ಎಸ್‌): ಬಾಳಾ ಠಾಕ್ರೆ ಅವರ ಮೇಲಿನ ಗೌರವದಿಂದಾಗಿ ಶಿವಸೇವಾ ವಿರುದ್ಧ ಒಂದೇ ಒಂದು ಶಬ್ದವನ್ನೂ ಮಾತನಾಡುವುದಿಲ್ಲ ಎಂದು ಹೇಳಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತಿಗೆ ಶಿವಸೇನಾ ಮುಖವಾಣಿ ‘ಸಾಮ್ನಾ’ ಸೋಮವಾರ ಸಂಪಾದಕೀಯದ ಮೂಲಕ ತಿರುಗೇಟು ನೀಡಿದೆ.

ಶಿವಸೇನಾ ಜತೆಗಿದ್ದ 25 ವರ್ಷಗಳ ಸುದೀರ್ಘ ಮೈತ್ರಿ ಮುರಿದುಬಿದ್ದಿದ್ದು ಮಹಾರಾಷ್ಟ್ರದಲ್ಲಿ ಬಿಜೆಪಿ ಸ್ವತಂತ್ರವಾಗಿ ಚುನಾವಣಾ ಕಣಕ್ಕಿಳಿದಿದೆ. ಸಾಂಗ್ಲಿಯ ತಾಸಗಾಂವ್‌ನಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಅವರು, ಶಿವಸೇನಾ ವಿರುದ್ಧ ಮಾತನಾಡುವುದಿಲ್ಲ ಎಂದು ಹೇಳಿದ್ದರು.

ಮೋದಿ ಅವರ ಈ ಮಾತಿಗೆ ಪ್ರತ್ಯುತ್ತರ ನೀಡಿರುವ ಶಿವಸೇನಾ, ‘ಬಾಳಾ ಠಾಕ್ರೆ ಅವರ ಬಗ್ಗೆ ಅವರ (ಮೋದಿ) ಹೃದಯದಲ್ಲಿ ಗೌರವವಿರುವುದನ್ನು ತಿಳಿದು ಸಂತೋಷವಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ 25 ವರ್ಷಗಳ ಬಿಜೆಪಿ– ಶಿವಸೇನಾ ಮೈತ್ರಿ ಮುರಿದಿದ್ದೇಕೆ? ಮೈತ್ರಿ ಮುರಿದ ಮೇಲೆ ಠಾಕ್ರೆ ಅವರ ಮೇಲಿನ ನಿಮ್ಮ ಗೌರವ ಎಲ್ಲಿದೆ?’ ಎಂದಿದೆ.

‘ಒಂದು ವೇಳೆ ಮೈತ್ರಿಯ ಬಗ್ಗೆ ಬಿಜೆಪಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರೆ ಅದು ಬಹುಶಃ ಅದು ಠಾಕ್ರೆ ಅವರಿಗೆ ಅಪೂರ್ವ ಗೌರವ ಸಲ್ಲಿಸಿದಂತಾಗುತ್ತಿತ್ತು. ಇದಲ್ಲದೆ ಮಹಾರಾಷ್ಟ್ರದ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರು ಛತ್ರಪತಿ ಶಿವಾಜಿ ಅವರ ಬಗ್ಗೆ ಇನ್ನಿಲ್ಲದ ಒಲವು ತೋರುತ್ತಿದ್ದಾರೆ. ಜೀವಮಾನದಲ್ಲಿ ಒಮ್ಮೆಯೂ ಶಿವಾಜಿ ಜಯಂತಿ ಆಚರಿಸದ ಅವರಿಗೆ ಶಿವಾಜಿ ಬಗ್ಗೆ ಈಗ ಎಲ್ಲಿಲ್ಲದ ಪ್ರೀತಿ ಮೂಡಿದೆ. ಇದು ರಾಯ್‌ಗಢ ಕೋಟೆಯಲ್ಲಿರುವ (ಶಿವಾಜಿ ಸಮಾಧಿ ಸ್ಥಳ) ಶಿವಾಜಿ ಆತ್ಮಕ್ಕೂ ಇರಿಸುಮುರಿಸು ತರುವಂಥದ್ದು’ ಎಂದು ‘ಸಾಮ್ನಾ’ ಕಿಡಿಕಾರಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.