ADVERTISEMENT

‘ಮೋದಿ, ಅಡ್ವಾಣಿ ಪಾಕಿಸ್ತಾನ ಭೇಟಿಗೆ ವಿರೋಧ ಯಾಕಿಲ್ಲ’

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST
‘ಮೋದಿ, ಅಡ್ವಾಣಿ ಪಾಕಿಸ್ತಾನ ಭೇಟಿಗೆ ವಿರೋಧ ಯಾಕಿಲ್ಲ’
‘ಮೋದಿ, ಅಡ್ವಾಣಿ ಪಾಕಿಸ್ತಾನ ಭೇಟಿಗೆ ವಿರೋಧ ಯಾಕಿಲ್ಲ’   

ಪಣಜಿ (ಪಿಟಿಐ): ‘ಪಾಕಿಸ್ತಾನವೆಂಬುದು ನರಕ’ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ನೀಡಿದ್ದ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ನೆರೆಯ ದೇಶಕ್ಕೆ ಭೇಟಿ ನೀಡಿದಾಗ ಏಕೆ ವಿರೋಧಿಸಲಿಲ್ಲ’ ಎಂದು ಪರಿಕ್ಕರ್ ಅವರನ್ನು ಪ್ರಶ್ನಿಸಿದರು.

ಪರಿಕ್ಕರ್ ಅವರು ಪಾಕಿಸ್ತಾನದ ಬಗ್ಗೆ ಆಡಿದ ಮಾತು ಹಾಗೂ ಅವರು ನಟ ಅಮೀರ್ ಖಾನ್ ಬಗ್ಗೆ ಆಡಿದ್ದಾರೆ ಎನ್ನಲಾದ ಮಾತು, ಬಿಜೆಪಿ–ಆರ್‌ಎಸ್‌ಎಸ್‌ ನಾಯಕರಲ್ಲಿರುವ ಅಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತವೆ ಎಂದು ದಿಗ್ವಿಜಯ್  ಟೀಕಿಸಿದರು.

‘ಪಾಕಿಸ್ತಾನ ನರಕ ಎಂದು ಹೇಳಿರುವ ಪರಿಕ್ಕರ್ ಅವರಿಗೆ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ತಕರಾರು ಇರಲಿಲ್ಲ’ ಎಂದು ವ್ಯಂಗ್ಯವಾಡಿದರು. ಗೋವಾ ವಿಧಾನಸಭೆ ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಪಾಕಿಸ್ತಾನದ ಮೊದಲ ಪ್ರಧಾನಿ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಅಡ್ವಾಣಿ ಅವರು ಹೊಗಳಿದಾಗ ಪರಿಕ್ಕರ್ ವಿರೋಧ ವ್ಯಕ್ತಪಡಿಸಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್‌ಗೆ ಬಸ್ ಯಾತ್ರೆ ಕೈಗೊಂಡಾಗ ಪ್ರತಿಕ್ರಿಯೆ ನೀಡಲಿಲ್ಲ’ ಎಂದು ದಿಗ್ವಿಜಯ್ ನೆನಪು ಮಾಡಿದರು.

‘ಪಾಕಿಸ್ತಾನ ನರಕ ಅಲ್ಲ ಎಂದು ಹೇಳಿದ್ದಕ್ಕೆ ಪಕ್ಷದ ನಾಯಕಿ, ಮಾಜಿ ಸಂಸದೆ ರಮ್ಯಾ ವಿರುದ್ಧ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ದೂರು ದಾಖಲಿಸಿದ್ದಾರೆ. ರಮ್ಯಾ ಹೇಳಿಕೆ ದೇಶದ್ರೋಹ ಆಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.