ADVERTISEMENT

ಮೋದಿ ಚಿಂತನೆಗಳ ಅನಾವರಣ

ಶೇಖರ್‌ ಅಯ್ಯರ್‌
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ನವದೆಹಲಿ: ಹೊಸದಾಗಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಸರ್ಕಾರ ಮಂಗಳವಾರ ಮಂಡಿಸಿದ ಪ್ರಥಮ ರೈಲ್ವೆ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಗಳ ನಿಚ್ಚಳವಾಗಿಯೇ ಗೋಚರಿಸಿದೆ. ಸರಿಸುಮಾರು ಒಂದು ದಶಕದಿಂದ ಜನಪ್ರಿಯತೆಯ ಹಳಿಯೇ ಮೇಲೆ ಸಾಗುತ್ತಾ ಬಂದಿದ್ದ ರೈಲ್ವೆ ಇಲಾಖೆಯನ್ನು ಪುನಶ್ಚೇತನದ ಜಾಡಿಗೆ ತರುವ ಪ್ರಸ್ತಾವಗಳನ್ನು ಬಜೆಟ್‌ ಒಳ­ಗೊಂಡಿದೆ.

ಬಜೆಟ್‌ ಮಂಡಿಸಿದ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರು ಮೋದಿ ಅವರ ಚಿಂತನೆಗಳನ್ನೆಲ್ಲಾ ಕಾರ್ಯರೂಪಕ್ಕಿಳಿಸಿದ್ದಾರೆ. ಸಂಸತ್‌ ಸದನದಲ್ಲಿ ಬಜೆಟ್‌ ಮಂಡನೆ ವೇಳೆ ಭಾಷಣ ಮಾಡಿದ ಅವರು, ಹಿಂದಿನ ಕೆಲವು ವರ್ಷಗಳ ರೈಲ್ವೆ ಬಜೆಟ್‌ಗಳು ಏಕೆ ಫಲ ನೀಡಲಿಲ್ಲ ಎಂಬುದನ್ನು ವಿವರವಾಗಿ ಪ್ರತಿಪಾದಿಸಿದರು.

ದೇಶದಲ್ಲಿ ರೈಲು ಪ್ರಯಾಣ ಎಂದರೆ ಹೇಗಿರ­ಬೇಕು, ಟಿಕೆಟ್‌ ಕೊಳ್ಳುವುದರಿಂದ ಹಿಡಿದು ನಿಲ್ದಾಣ­ದಲ್ಲಿ ಇಳಿಯುವವರೆಗೆ ಪ್ರಯಾಣಿಕನಿಗೆ ಎಂತಹ ಅನುಭವವಾಗಬೇಕು, ಸೇವೆ ಒದಗಿಸುವಿಕೆ ಹೇಗೆ ಸುಗಮ ಹಾಗೂ ಆಧುನಿಕವಾಗಿರಬೇಕು ಎಂಬ ಬಗ್ಗೆ ಮೋದಿ ಅವರ ಆಶಯಗಳೇನು ಎಂಬು­ದನ್ನೂ ಸದಾನಂದ ಗೌಡರು ತಿಳಿಸಿದರು.

ಕೆಲವು ವರ್ಷಗಳಿಂದ ಕಡೆಗಣನೆಗೆ ಒಳಗಾಗಿದ್ದ ಪ್ರಯಾಣಿಕರ ಸೌಲಭ್ಯಗಳ ಸುಧಾರಣೆ, ಶುಚಿತ್ವ ಪಾಲನೆ ಮತ್ತು ನಿಲ್ದಾಣಗಳ ದಕ್ಷ ನಿರ್ವಹಣೆಗೆ ಒತ್ತು ನೀಡುವಂತೆ ಮೋದಿ ಅವರು ಸದಾನಂದ ಗೌಡ ಅವರಿಗೆ ಸೂಚಿಸಿದ್ದರು. ಅದೆಲ್ಲಕ್ಕಿಂತ ಹೆಚ್ಚಾಗಿ, ‘ಈಗಲೂ ಜನಪ್ರಿಯತೆಯ ಚುಂಗನ್ನೇ ಹಿಡಿದುಕೊಂಡು ಸಾಗಲಾಗದು’ ಎಂಬ ಸಂದೇಶ­ವನ್ನು ರಾಜಕೀಯ ಪಕ್ಷಗಳಿಗೆ ರವಾನಿಸುವಂತೆ ಡಿವಿಎಸ್‌ ಅವರಿಗೆ ನಿರ್ದೇಶನ ನೀಡಿದ್ದರು.

ಮೋದಿ ಅವರ ನಿರ್ದೇಶನ ಸದಾನಂದ ಗೌಡರು ಸದನದಲ್ಲಿ ಆಡಿದ ಮಾತುಗಳಲ್ಲಿ ಪ್ರತಿಫಲಿಸಿತು. ‘125 ಕೋಟಿಯಷ್ಟು ಗ್ರಾಹಕ ತಳಹದಿ ಹೊಂದಿ­ರುವ, ಮುಂಗಡ ಪಾವತಿಸಿದರೆ ಶೇ 100ರಷ್ಟು ಸೇವಾ ಖಾತ್ರಿ ಒದಗಿಸುವ ರೈಲ್ವೆ ಇಲಾಖೆಯು ನಿಧಿ ಕೊರತೆಯಿಂದ ಬಳಲುತ್ತಿದೆ’ ಎನ್ನುವ ಮೂಲಕ 10 ವರ್ಷಗಳಿಂದ ಸರ್ಕಾರ ಅನುಸರಿಸತ್ತಾ ಬಂದ ರೈಲ್ವೆ ನೀತಿ ಎಷ್ಟು ದುರ್ಬಲ ಎಂಬುದನ್ನು ಬಿಂಬಿ­ಸುವ ಯತ್ನ ಮಾಡಿದರು.

ಹಿಂದಿನ ವರ್ಷಗಳಲ್ಲಿ ದರ ನಿಗದಿಗೆ ಸಂಬಂಧಿಸಿ­ದಂತೆ ಕೈಗೊಳ್ಳಲಾದ ದೋಷಪೂರ್ಣ ನಿರ್ಧಾರ­ಗಳ ಪಟ್ಟಿಯನ್ನು ಅವರು ಸದನದಲ್ಲಿ ಬಿಚ್ಚಿಟ್ಟರು. ಎಷ್ಟು ಕಾರ್ಯಸಾಧ್ಯವೋ ಅದಕ್ಕಿಂತ ಹೆಚ್ಚು ಯೋಜನೆಗಳನ್ನು ಹಮ್ಮಿಕೊಂಡಿದ್ದರಿಂದ ಆದ ಎಡವಟ್ಟುಗಳ ಬಗ್ಗೆಯೂ ಪ್ರಸ್ತಾಪಿಸಿದರು. ‘ಹತ್ತು ವರ್ಷಗಳ ದುರಾಡಳಿತ ಮತ್ತು ಜಡತ್ವವೇ ರೈಲ್ವೆ ಇಲಾಖೆಯನ್ನು ತೀವ್ರ ನಿಧಿ ಕೊರತೆಯ ಸಂಕಷ್ಟಕ್ಕೆ ದೂಡಿದೆ’ ಎಂದರು.

ರೈಲ್ವೆ ಸಚಿವರ ಮಾತಿನಲ್ಲೇ ಹೇಳುವುದಾದರೆ– ‘‘ಇದು ‘ದಶಕದ ಅವಧಿಯ ಮಹಾ ಇಬ್ಬಂದಿ­ತನ’ದ ಫಲವಾಗಿದೆ. ವಾಣಿಜ್ಯ ಕಾರ್ಯಸಾಧುತ್ವ ಹಾಗೂ ಸಾಮಾಜಿಕ ಕಾರ್ಯಸಾಧುತ್ವಗಳಲ್ಲಿ ಯಾವುದನ್ನು ಆಯ್ದು ಕೊಳ್ಳಬೇಕೆಂಬ ಇಬ್ಬಂದಿತನ­ದಲ್ಲಿ ಸರ್ಕಾರ ಸಿಲುಕಿಹೋಗಿತ್ತು’’

‘ಇಲಾಖೆ ಎಂತಹ ಆಪತ್ತಿನಲ್ಲಿದೆ ಎಂಬುದು ಹಿಂದೆ ಅಧಿಕಾರದಲ್ಲಿದ್ದವರಿಗೆ ನಿಶ್ಚಿತವಾಗಿಯೂ ಗೊತ್ತಿತ್ತು. ಆದರೂ ಅವರೆಲ್ಲಾ ಸದನದಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿ ಚಪ್ಪಾಳೆ ಗಿಟ್ಟಿಸುವ ನಶೆಗೆ ಮರುಳಾದರು. ಹೀಗಾಗಿಯೇ ಅವರು ದರ ಏರಿಸಲು ಹಾಗೂ ಕಠಿಣ ಕ್ರಮ ತೆಗೆದು­ಕೊಳ್ಳಲು ಮುಂದಾಗಲಿಲ್ಲ’ ಎಂದೂ ಸದಾ­ನಂದ ಗೌಡರು ಕುಟುಕಿದರು.

‘ರೈಲ್ವೆ ಇಲಾಖೆ ಎಂದರೆ ರಾಜಕೀಯ ಅನು­ಕೂಲ­ತೆ­ಗಳನ್ನು ಸಾಧಿಸಲು ಇರುವ ಸಾಧನವಲ್ಲ. ಮೂಲಭೂತವಾಗಿ ಸೇವಾ ಉದ್ಯಮವಾಗಿರುವ ಇದು ಮೂಲಸೌಕರ್ಯಕ್ಕೆ ಸಂಬಂಧಿಸಿದ ವಿಷಯ ಎಂಬುದೇ ತಮ್ಮ ದೃಢವಾದ ನಂಬಿಕೆ ಎನ್ನುವುದು ಚರಿತ್ರೆಯದಲ್ಲಿ ದಾಖಲಾಗಬೇಕು’ ಎಂಬ ಇರಾದೆ ಗೌಡರ ಮಾತುಗಳಲ್ಲಿ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.