ಬೆಂಗಳೂರು: ವಿದೇಶಿ ಬ್ಯಾಂಕ್ನಲ್ಲಿನ ಕಪ್ಪುಹಣ ಖಾತೆದಾರರ ವಿಷಯ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲಿಯೇ ‘ಇನ್ಸ್ಟಾವಾಣಿ‘ಯು ಈ ಬಗ್ಗೆ ೯೨೭ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಸ್ವಿಟ್ಜರ್ಲೆಂಡ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣದ ಬಗ್ಗೆ ಬಂದ ವರದಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಪ್ರೀಂಕೋರ್ಟ್ ಕಾರ್ಯವೈಖರಿ ಬಗೆಗಿನ ಜನಾಭಿಪ್ರಾಯದ ಮೇಲೆ ಪರಿಣಾಮ ಬೀರಿವೆ.
‘ಪ್ರಧಾನಿಯಾಗಿ ಮೋದಿ ಅವರ ಒಟ್ಟಾರೆ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದೀರಾ’ ಎಂದು ಕೇಳಿದ ಪ್ರಶ್ನೆಗೆ ಶೇ ೯೧.೬ರಷ್ಟು ಜನ ಹೌದು ಎಂದು ಉತ್ತರಿಸಿದ್ದಾರೆ. ಇದೇ ಪ್ರಶ್ನೆಗೆ ಅಧಿಕ ಆದಾಯ ವರ್ಗದ (ಸ್ವಂತ ಕಾರು ಹೊಂದಿರುವವರು) ಶೇ ೯೫ರಷ್ಟು ಜನ ಹೌದು ಎಂದಿದ್ದಾರೆ.
ಆದರೆ, ನಿರ್ದಿಷ್ಟವಾಗಿ ಕಪ್ಪು ಹಣದ ವಿಷಯದಲ್ಲಿ ಮೋದಿ ಅವರ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸಿದಾಗ ಶೇ ೮೪ರಷ್ಟು ಜನರಿಂದ ಮಾತ್ರ ಸಮ್ಮತಿ ವ್ಯಕ್ತವಾಗಿದೆ. ಇನ್ನು, ಈ ವಿಷಯದಲ್ಲಿ ಸುಪ್ರೀಂಕೋರ್ಟ್್ ಕಾರ್ಯವೈಖರಿಯೆಡೆಗಿನ ಜನರ ಸಮ್ಮತಿ ಕೂಡ ಇಳಿಮುಖವಾಗಿದೆ. ಶೇ ೭೨.೩ರಷ್ಟು ಜನ ಮಾತ್ರ ಸುಪ್ರೀಂಕೋರ್ಟ್ ನಿಲುವನ್ನು ಒಪ್ಪಿಕೊಂಡಿದ್ದಾರೆ.
ಸ್ವಿಟ್ಜರ್ಲೆಂಡ್ ಬ್ಯಾಂಕ್ನಲ್ಲಿ ಇರುವ ಕಪ್ಪುಹಣದ ಖಾತೆದಾರರ ಪೂರ್ಣ ಪಟ್ಟಿಯನ್ನು ಬಹಿರಂಗಪಡಿಸದಿರಲು ಸುಪ್ರೀಂಕೋರ್ಟ್ ತಳೆದ ನಿರ್ಧಾರಕ್ಕೆ ಶೇ ೫೧ರಷ್ಟು ಮಂದಿ ಅಸಮ್ಮತಿ ಸೂಚಿಸಿದ್ದಾರೆ. ಕಪ್ಪುಹಣಕ್ಕೆ ಸಂಬಂಧಿಸಿ ಮೋದಿ ಹಾಗೂ ಸುಪ್ರೀಂಕೋರ್ಟ್್ ಕಾರ್ಯವೈಖರಿಯೆಡೆಗಿನ ಅಧಿಕ ಆದಾಯ ವರ್ಗದ ಜನಸಮ್ಮತಿಯು ಕ್ರಮವಾಗಿ 10 ಹಾಗೂ ೨೭ ಅಂಶಗಳಷ್ಟು ಕುಸಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.