ADVERTISEMENT

ಮೋದಿ ಬಂಧನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಮೇ 2014, 7:20 IST
Last Updated 2 ಮೇ 2014, 7:20 IST

ನವದೆಹಲಿ/ಅಹಮದಾಬಾದ್‌ (ಪಿಟಿಐ):  ಮತಗಟ್ಟೆ ಹೊರಗೆ ಪಕ್ಷದ ಚಿಹ್ನೆ ಪ್ರದರ್ಶಿಸಿದ ವಿವಾದದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬಂಧಿಸಬೇಕೆಂದು ಕಾಂಗ್ರೆಸ್‌ ಹಾಗೂ ಜೆಡಿಯು ಪಟ್ಟು ಹಿಡಿದಿವೆ.

ಇನ್ನೊಂದೆಡೆ ಗುಜರಾತ್‌ ಪೊಲೀ­ಸರು,  ಮೋದಿ, ಮತಗಟ್ಟೆಯಿಂದ 100 ಮೀಟರ್‌ಗಳ  ನಿರ್ಬಂಧಿತ ಪ್ರದೇಶದ ಹೊರಗೆ ಸುದ್ದಿಗಾರರೊಂದಿಗೆ ಮಾತನಾ­ಡಿ­ದ್ದರು ಎಂದು ಹೇಳಿದ್ದಾರೆ. ಗುಜರಾತ್‌ನ ಗಾಂಧಿನಗರ ಮತ­ಗಟ್ಟೆಯಲ್ಲಿ ಬುಧವಾರ ಮತ ಚಲಾಯಿ­ಸಿದ ಬಳಿಕ ಸುದ್ದಿಗಾರರೊಂದಿಗೆ ಮಾತ­ನಾಡುತ್ತ ಪಕ್ಷದ ಚಿಹ್ನೆ ಪ್ರದರ್ಶಿಸಿದ ಮೋದಿ ವಿರುದ್ಧ ಈಗಾಗಲೇ ಎಫ್‌್ಐಆರ್‌್ ದಾಖಲಿಸಲಾಗಿದೆ.

‘ಮೋದಿ ಅವರು ಮತಗಟ್ಟೆಯಿಂದ ಹೊರಗೆ ಸುದ್ದಿಗೋಷ್ಠಿ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಅಹಮದಾಬಾದ್‌ನ ಅಪರಾಧ ಪತ್ತೆ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಯೋಗಕ್ಕೆ ಪತ್ರ: ಮೋದಿಯವರನ್ನು ಬಂಧಿಸಬೇಕೆಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಪತ್ರ ಬರೆದಿದೆ.  ಮೋದಿ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ  ಸೆಕ್ಷನ್‌ 130 ಸೇರಿಸಬೇಕು ಎಂದು ಕಾಂಗ್ರೆಸ್‌ನ ಕಾನೂನು ಹಾಗೂ ಮಾನವ ಹಕ್ಕುಗಳ ವಿಭಾಗದ ಕಾರ್ಯದರ್ಶಿ ಕೆ.ಸಿ.ಮಿತ್ತಲ್‌ ಒತ್ತಾಯಿಸಿದ್ದಾರೆ.

ಪ್ರಜಾಪ್ರತಿನಿಧಿ  ಕಾಯ್ದೆ– 1951ರ ಸೆಕ್ಷನ್‌ 126 ಹಾಗೂ 130ರ ಅನ್ವಯ ಮೋದಿ ವಿರುದ್ಧ ಆರೋಪ ಹೊರಿಸ­ಬೇಕು ಮತ್ತು ಕೂಡಲೇ ಅವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮತದಾನ ರದ್ದತಿಗೆ ಒತ್ತಾಯ:  ಮೋದಿ, ಮಾದರಿ ನೀತಿಸಂಹಿತೆ ಉಲ್ಲಂಘಿ­ಸಿದ್ದಕ್ಕಾಗಿ ಅವರು ಸ್ಪರ್ಧಿಸಿರುವ ವಾರಾಣಸಿ ಮತ್ತು ವಡೋದರಾದಲ್ಲಿ  ಚುನಾವಣೆ ಸ್ಥಗಿತಗೊಳಿಸಬೇಕು ಎಂದೂ ಜೆಡಿಯು, ಆಯೋಗವನ್ನು ಆಗ್ರಹಿಸಿದೆ.

ದ್ವೇಷ ಭಾಷಣ ತಡೆಯಲು ಆಯೋಗ ವಿಫಲವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌. ಸಂಪತ್‌್ ಅವರಿಗೆ ಬರೆದ ಪತ್ರದಲ್ಲಿ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.