ADVERTISEMENT

ಮೋದಿ ಮೋಡಿಯಿಂದ ಗೆಲುವು: ರಾಜೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 20:05 IST
Last Updated 8 ಡಿಸೆಂಬರ್ 2013, 20:05 IST

ನವದೆಹಲಿ/ ಜೈಪುರ: ರಾಜಸ್ತಾನದಲ್ಲಿ ಬಿಜೆಪಿ ಚುನಾವಣಾ ಹೋರಾಟವನ್ನು ಮುನ್ನಡೆಸಿದ್ದ ವಸುಂಧರಾ ರಾಜೆ ಸಿಂಧಿಯಾ, ತಮ್ಮ ಪಕ್ಷದ ಭರ್ಜರಿ ಗೆಲುವಿಗೆ ನರೇಂದ್ರ ಮೋದಿ ಅವರ ವರ್ಚಸ್ಸೇ ಕಾರಣ ಎಂದಿದ್ದಾರೆ.

‘ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರು ಇಲ್ಲಿನ ಚುನಾವಣೆ ಮೇಲೆ ಬಹುದೊಡ್ಡ ಪ್ರಭಾವ ಬೀರಿದರು. ಗುಜರಾತ್‌ ಮುಖ್ಯಮಂತ್ರಿಯಾಗಿ ಅವರೇನು ಮಾಡಿದ್ದಾರೆ ಎಂಬುದನ್ನು ಜನತೆ ಗಮನಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಅಂತಿಮ ಪೈಪೋಟಿಗೆ ಮುಂಚಿನ ಸೆಮಿಫೈನಲ್‌ ಇದಾಗಿದೆ.  ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆಂಬುದಕ್ಕೆ ಇವತ್ತಿನ ಫಲಿತಾಂಶ ಶುಭಸೂಚನೆಯಾಗಿದೆ’ ಎಂದು ಎರಡನೇ ಬಾರಿಗೆ ರಾಜಸ್ತಾನದ ಮುಖ್ಯಮಂತ್ರಿ ಆಗುವ ಹೊಸ್ತಿಲಲ್ಲಿರುವ ವಸುಂಧರಾ ಅಭಿಪ್ರಾಯಪಟ್ಟರು.

ಬಿಜೆಪಿ ಅಪಪ್ರಚಾರ: ಗೆಹ್ಲೋಟ್‌
ನಿರ್ಗಮಿತ ಮುಖ್ಯಮಂತ್ರಿ ಅಶೋಕ್‌ ಗೆಹ್ಲಾಟ್‌ ಮಾತನಾಡಿ, ಬಿಜೆಪಿ ನಡೆಸಿದ ಅಪಪ್ರಚಾರವೇ ಕಾಂಗ್ರೆಸ್‌ ಪಕ್ಷದ ಸೋಲಿಗೆ ಕಾರಣ ಎಂದಿದ್ದಾರೆ.

‘ನಮ್ಮ ಸೋಲಿಗೆ ಕಾರಣವೇ ಇರಲಿಲ್ಲ. ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಪ್ರಚಾರ ನಡೆಸಿದ್ದೆವು. ಆದರೆ ಜನರನ್ನು ತಲುಪಲು ನಾವು ವಿಫಲವಾದೆವು’ ಎಂದು ಗೆಹ್ಲಾಟ್‌ ಹೇಳಿದ್ದಾರೆ.

‘ರಾಜಸ್ತಾನದಲ್ಲಿ ಸರ್ಕಾರದ ವಿರೋಧಿ ಅಲೆ ಗುಪ್ತಗಾಮಿನಿಯಂತೆ ವರ್ತಿಸಿದೆ. ಇಂತಹ ಗುಪ್ತಗಾಮಿನಿ ಶಕ್ತಿ ಇದ್ದಾಗ ಯಾರೂ ಏನನ್ನೂ ಮಾಡಲಾಗದು. ಸರ್ಕಾರ ಆಡಳಿತದಲ್ಲಿದ್ದಾಗ ಜನಪರ ಯೋಜನೆಗಳನ್ನೇ ಜಾರಿಗೊಳಿಸಿದೆ. ಆದರೆ ನಾವು ಹಮ್ಮಿಕೊಂಡ ಯೋಜನೆಗಳನ್ನು ಚುನಾವಣಾ ವಿಷಯಗಳನ್ನಾಗಿ ಮಾಡಲು ಪಕ್ಷ ವಿಫಲವಾಯಿತು’ ಎಂದು ಅವರು ವಿಶ್ಲೇಷಿಸಿದ್ದಾರೆ.

ವಸುಂಧರಾ ರಾಜೆ ಅವರು ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಕೋರಿದ್ದರು. ಹೀಗಾಗಿ ಬಿಜೆಪಿ ಗೆಲುವಿಗೆ ವಸುಂಧರಾ ಕಾರಣವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ತಾನದಲ್ಲಿ ಎರಡೂ ಪಕ್ಷಗಳ ಉನ್ನತ ನಾಯಕರು ಭರಾಟೆಯ ಪ್ರಚಾರ ನಡೆಸಿದ್ದರು. ಒಂದೆಡೆ ನರೇಂದ್ರ ಮೋದಿ ಹಾಗೂ ಮತ್ತೊಂದೆಡೆ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ರ್‍ಯಾಲಿಗಳು ನಡೆದಿದ್ದವು.

ಚುನಾವಣೆಗೆ ಮುನ್ನವೇ ಭ್ರಷ್ಟಾಚಾರ ಆರೋಪಗಳು ಸುಳಿಗೆ ಸಿಲುಕಿದ್ದ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ವೇಳೆಯೂ ಯಡವಟ್ಟು ಮಾಡಿಕೊಂಡಿತ್ತು. ಭಂವರಿ ದೇವಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಇಬ್ಬರು ರಾಜಕಾರಣಿಗಳ ಬಂಧುಗಳಿಗೆ ಟಿಕೆಟ್‌ ನೀಡಿ ಪಕ್ಷದೊಳಗಿನಿಂದಲೇ ಸಾಕಷ್ಟು ಟೀಕೆಗೆ ಒಳಗಾಗಿತ್ತು.

ಗಾಂಧಿ ಕುಟುಂಬದ ವೈಫಲ್ಯ ಎತ್ತಿ ಹಿಡಿದ ಫಲಿತಾಂಶ
ಮುಂಬೈ (ಪಿಟಿಐ): ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಮೋಘ ಸಾಧನೆಯನ್ನು ಹೊಗಳಿರುವ ಮಿತ್ರ ಪಕ್ಷ ಶಿವಸೇನೆ, ಈ ಫಲಿತಾಂಶ ಕಾಂಗ್ರೆಸ್ ವಿರುದ್ಧ ಜನ ಮುನಿಸಿಕೊಂಡಿರುವುದನ್ನು ತೋರಿಸಿದೆ ಎಂದು ಹೇಳಿದೆ.

ಫಲಿತಾಂಶ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ಸಂಜಯ್ ರಾವತ್, ‘ಚುನಾವಣಾ ಫಲಿತಾಂಶ ಬಿಜೆಪಿಯ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ನಾಲ್ಕು ರಾಜ್ಯಗಳ ಪೈಕಿ, ಮೂರರಲ್ಲಿ ಮುಗ್ಗರಿಸಿರುವ ಕಾಂಗ್ರೆಸ್, ಗಾಂಧಿ ಕುಟುಂಬದ ವೈಫಲ್ಯವನ್ನು ಎತ್ತಿ ತೋರಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT