ADVERTISEMENT

ಯೋಗಿ ಆದಿತ್ಯನಾಥ್ ಅವರ ಆಪ್ತ, ಗೋರಖ್‍ನಾಥ್ ದೇವಾಲಯದ ಗೋಶಾಲೆಯಲ್ಲಿ ಕೆಲಸ ಮಾಡುವ ಈತನ ಹೆಸರು ಮನ್ ಮೊಹಮ್ಮದ್ !

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 13:36 IST
Last Updated 20 ಮಾರ್ಚ್ 2017, 13:36 IST
ಯೋಗಿ ಆದಿತ್ಯನಾಥ್ ಅವರ ಆಪ್ತ, ಗೋರಖ್‍ನಾಥ್ ದೇವಾಲಯದ ಗೋಶಾಲೆಯಲ್ಲಿ ಕೆಲಸ ಮಾಡುವ ಈತನ ಹೆಸರು ಮನ್ ಮೊಹಮ್ಮದ್ !
ಯೋಗಿ ಆದಿತ್ಯನಾಥ್ ಅವರ ಆಪ್ತ, ಗೋರಖ್‍ನಾಥ್ ದೇವಾಲಯದ ಗೋಶಾಲೆಯಲ್ಲಿ ಕೆಲಸ ಮಾಡುವ ಈತನ ಹೆಸರು ಮನ್ ಮೊಹಮ್ಮದ್ !   

ಉತ್ತರಪ್ರದೇಶ: ಇಲ್ಲಿನ ಗೋರಖ್‍ನಾಥ್ ದೇವಾಲಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೇಸರಿ ಶಾಲು ಹೊದ್ದ ಹಿಂದೂ ಕಾರ್ಯಕರ್ತರಿಗೂ ಈ ಯುವಕನಿಗೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ, ಈತನ ಹೆಸರು ಮನ್ ಮೊಹಮ್ಮದ್.

ಈ ಮುಸ್ಲಿಂ ಯುವಕ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಪ್ತ.

ಈತ 10 ವರ್ಷದವನಿದ್ದಾಗ ಗೋರಖ್‍ನಾಥ್ ದೇವಾಲಯದ ಗೋಶಾಲೆಯಲ್ಲಿ ಕೆಲಸ ಆರಂಭ ಮಾಡಿದ್ದನು. ಕಡು ಬಡತನವಿರುವ ಕುಟುಂಬದ ಈತನನ್ನು ಈತನ ಅಪ್ಪ ಇನಾಯತುಲ್ಲಾ ಗೋರಖ್‍ಪುರದ ಈ ಗೋಶಾಲೆಯಲ್ಲಿ ಕೆಲಸಕ್ಕಿರಿಸಿದ್ದರು. ಈತ ಕೆಲಸಕ್ಕೆ ಸೇರಿದಾಗ ಮಹಂತ್ ದಿಗ್ವಿಜಯ್ ನಾಥ್ ಮತ್ತು ಮಹಂತ್ ಅವೈದ್ಯನಾಥ್ ಅವರು ಈ ದೇವಾಲಯದ ಪ್ರಧಾನ ಅರ್ಚಕರಾಗಿದ್ದರು.

ADVERTISEMENT

ಅವಿವಾಹಿತನಾಗಿರುವ ಮನ್ ಮೊಹಮ್ಮದ್‍ಗೆ ಇತರ ಕಾರ್ಯಕರ್ತರಿಗೆ ನೀಡುವಷ್ಟೇ ಸಂಬಳವನ್ನೂ, ಆಹಾರವನ್ನೂ ನೀಡಲಾಗುತ್ತದೆ.

ಮೂರು ಬಾರಿ ಶಾಸಕ ಮತ್ತು ಸಂಸದರಾಗಿದ್ದ ಮಹಂತ್ ಅವೈದ್ಯನಾಥ್ ಅವರ ನಂತರ ಹಿಂದೂ ಮಹಾಸಭಾ ಟಿಕೆಟಿನಲ್ಲಿ ಸ್ಪರ್ಧಿಸಿ ಸಂಸದರಾದ ಮಹಂತ್ ದಿಗ್ವಿಜಯ್ ನಾಥ್ ಅವರು ಗೋರಖ್‍ಪುರ್ ದೇವಾಯಲದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.

ಮಹಂತ್ ಅವೈದ್ಯನಾಥ್ ಅವರು ತಮ್ಮ ಅಧಿಕಾರವನ್ನು ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಿದ್ದರು. ಅಂದರೆ ಯೋಗಿ ಆದಿತ್ಯನಾಥ್ ಅವರು ಅವೈದ್ಯನಾಥ್ ಅವರು ಸ್ಪರ್ಧಿಸಿ ಗೆದ್ದಿದ್ದ ಚುನಾವಣಾ ಕ್ಷೇತ್ರದಲ್ಲಿಯೇ 1998ರಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು. 2014ರಲ್ಲಿ ಅವೈದ್ಯನಾಥ್ ಮರಣಹೊಂದಿದ್ದರು.

ಮನ್ ಮೊಹಮ್ಮದ್ ಅವರು ಇಲ್ಲಿ ನಮಾಜ್ ಮಾಡುತ್ತಾರೆ. ಮುಸ್ಲಿಂ ಸಮುದಾಯದವರ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಇಲ್ಲಿರುವ ಹಿಂದೂ ಕಾರ್ಯಕರ್ತರಿಗೆ ಮನ್ ಮೊಹಮ್ಮದ್ ಜತೆ ಉತ್ತಮ ಸ್ನೇಹ ಸಂಬಂಧವಿದೆ. ಧರ್ಮಗಳು ಇಲ್ಲಿ ಯಾವುದೇ ಅಂತರವನ್ನು ಸೃಷ್ಟಿಸಿಲ್ಲ.
ನಾನು ನನ್ನ ಬಾಲ್ಯವನ್ನು ಇದೇ ದೇವಾಲಯದಲ್ಲಿ ಕಳೆದಿದ್ದೀನಿ.ಇದು ನನ್ನ ಮನೆಯಂತೆಯೇ. ಯೋಗಿಜೀ ನನಗೆ ಪ್ರೀತಿ, ಆದರವನ್ನು ಕೊಡುತ್ತಾರೆ. ನನ್ನ ಮುಂದಿನ ಜೀವನವನ್ನು ನಾನಿಲ್ಲೇ ಕಳೆಯಲು ಬಯಸುತ್ತೀನಿ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿದ ಮನ್ ಹೇಳಿದ್ದಾರೆ.

ಗೋವುಗಳತ್ತವಿರುವ ನನ್ನ ಸಮರ್ಪಣಾಭಾವವನ್ನು ಯೋಗಿಗಳು ತುಂಬಾ ಮೆಚ್ಚುತ್ತಾರೆ.ಇವುಗಳಲ್ಲಿ ನಂದಿನಿ ಹಸು ನನ್ನಿಷ್ಟದ್ದು. ಹಸುಗಳಿಗೆ ಆಹಾರ ನೀಡದೆ ಯೋಗಿಜಿ ಯಾವತ್ತೂ ಬೆಳಗ್ಗಿನ ತಿಂಡಿ ಸೇವಿಸುವುದಿಲ್ಲ ಅಂತಾರೆ ಇವರು.

ಮನ್ ಅವರ ಅಪ್ಪ ಇಲ್ಲಿಂದ 40ಕಿಮಿ ದೂರವಿರುವ ಮಹಾರಾಜ್‍ಗಂಜ್‍ನಲ್ಲಿ ವಾಸವಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರ ಚಿಕಿತ್ಸೆಯ ಖರ್ಚುಗಳನ್ನೆಲ್ಲಾ ಯೋಗಿ ಆದಿತ್ಯನಾಥ್ ಅವರೇ ವಹಿಸುತ್ತಿದ್ದಾರೆ.

ಹಿಂದುತ್ವದ ಕಟ್ಟಾ ಪ್ರತಿಪಾದಕರೆಂದೇ ಯೋಗಿಯವರು ಗುರುತಿಸಿಕೊಳ್ಳುತ್ತಾರೆ. ಆದರೆ ವೈಯಕ್ತಿಕ ಸಂಬಂಧಗಳ ಬಗ್ಗೆ ಹೇಳುವುದಾದರೆ ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ಅವರು ಎಲ್ಲರನ್ನೂ ಸಮಾನರಾಗಿ ಕಾಣುತ್ತಾರೆ.

ಈಗ ಮುಖ್ಯಮಂತ್ರಿ ಆಗಿರುವ ಅವರು ಎಲ್ಲರ ಅಭಿವೃದ್ಧಿಗಾಗಿ ದುಡಿಯಲಿದ್ದಾರೆ. ಎಲ್ಲ ಸಮುದಾಯದವರ ಏಳಿಗೆ ಅವರಿಂದ ಸಾಧ್ಯ ಎಂದು ಮನ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.