ADVERTISEMENT

ರಸ್ತೆಯ ಮೇಲಲ್ಲ, ಮನಸ್ಸಲ್ಲಿದೆ ಕಸ

ವಿಭಜನಾತ್ಮಕ ಚಿಂತನೆಗಳನ್ನು ತೊಡೆದು ಹಾಕಲು ರಾಷ್ಟ್ರಪತಿ ಕರೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

ಅಹಮದಾಬಾದ್ (ಪಿಟಿಐ): ‘ನಿಜವಾದ ಕಸ ನಮ್ಮ ರಸ್ತೆಗಳ ಮೇಲೆ ಬಿದ್ದಿಲ್ಲ, ನಮ್ಮ ಮನಸ್ಸಿನಲ್ಲಿ ತುಂಬಿದೆ. ವಿಭಜನಾತ್ಮಕ ಚಿಂತನೆಗಳನ್ನು ತೊಡೆದು ಹಾಕುವ ಮೂಲಕ ಮನಸ್ಸನ್ನು  ಸ್ವಚ್ಛಗೊಳಿಸಿ’ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು  ಕರೆ ನೀಡಿದ್ದಾರೆ.

ರಾಷ್ಟ್ರಪತಿ ಅವರ ಈ ಮಾತಿನಿಂದ ದೇಶದಲ್ಲಿ ನಡೆಯುತ್ತಿರುವ ಅಸಹಿಷ್ಣತೆ ಬಗೆಗಿನ ಚರ್ಚೆಗೆ ಮತ್ತಷ್ಟು ಮಹತ್ವ ಬಂದಿದೆ. ಮೂರು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಅವರು, ರಾಜ್ಯದ ವಿವಿಧೆಡೆ ನಡೆದ ಕಾರ್ಯಕ್ರಮಗಳ ವೇಳೆ, ‘ಎಲ್ಲಾ ಸ್ವರೂಪದ ಹಿಂಸೆಯಿಂದ ಸಮಾಜ ಮುಕ್ತವಾಗಿರಬೇಕು’ ಎಂಬ ಸಂದೇಶ ನೀಡಿದ್ದಾರೆ.

ಸಾಬರಮತಿ ಆಶ್ರಮದಲ್ಲಿ ಸಂಗ್ರಹಾಲಯವೊಂದನ್ನು ಉದ್ಘಾಟಿಸಿದ ವೇಳೆ, ಕೇಂದ್ರ ಸರ್ಕಾರದ ಸ್ವಚ್ಛಭಾರತ ಅಭಿಯಾನವನ್ನು ಉಲ್ಲೇಖಿಸಿ ಅವರು ಮಾತನಾಡಿದ್ದಾರೆ. ‘ಮೊದಲಿಗೆ ಮನಸ್ಸಿನಲ್ಲಿನ, ನಂತರ ದೇಹದ, ಕೊನೆಗೆ ಪರಿಸರದಲ್ಲಿನ ಕೊಳೆಯನ್ನು ತೊಡೆದು ಹಾಕುವುದು  ಬಾಪು ಅವರ ಸ್ವಚ್ಛ ಭಾರತದ ಕಲ್ಪನೆಯಾಗಿತ್ತು. ಸಮಾಜವನ್ನು ವಿಭಜಿಸುವ ‘ನಾವು’ ಮತ್ತು ‘ಅವರು’ ಹಾಗೂ ‘ಶುದ್ಧ’ ಮತ್ತು ‘ಅಶುದ್ಧ’ ಎಂಬ ಚಿಂತನೆಗಳನ್ನು ನಾಶ ಮಾಡಬೇಕು’ ಎಂದು ಅವರು ಕರೆ ನೀಡಿದ್ದಾರೆ.

‘ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಯಶಸ್ಸನ್ನು ನಾವು ಸ್ವಾಗತಿಸಬೇಕು ಮತ್ತು ಶ್ಲಾಘಿಸಬೇಕು’ ಎಂದೂ ಅವರು ಹೇಳಿದ್ದಾರೆ. ಗುಜರಾತ್‌ ವಿದ್ಯಾಪೀಠದ 62ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಗಾಂಧೀಜಿ ತಮ್ಮ ಜೀವನ ಮತ್ತು ಸಾವಿನಲ್ಲೂ ಸಮಾಜದಲ್ಲಿ ಕೋಮು ಸೌಹಾರ್ದವನ್ನು ಸ್ಥಾಪಿಸಲು ಹೋರಾಡಿದರು. ಶಾಂತಿ ಮತ್ತು ಸೌಹಾರ್ದತೆ ಬಗ್ಗೆ ಅರಿವು ಮೂಡಿಸುವುದೇ ಸಮಾಜದಲ್ಲಿನ ವಿಚ್ಛಿದ್ರಕಾರಿ ಶಕ್ತಿಗಳನ್ನು ತೊಡೆದು ಹಾಕಲು ಇರುವ ಏಕೈಕ ಮಾರ್ಗ’ ಎಂದು  ಹೇಳಿದ್ದಾರೆ.

‘ದೈಹಿಕ ಮತ್ತು ಮಾತಿನ ಸ್ವರೂಪದ  ಹಿಂಸೆಯಿಂದ ಸಮಾಜ ಮುಕ್ತವಾಗಿರಬೇಕು. ಅಹಿಂಸಾ ಸಮಾಜ ಮಾತ್ರ ತಳ ಸಮುದಾಯ, ಅಲ್ಪಸಂಖ್ಯಾತರನ್ನೂ ತನ್ನೊಳಗೆ ಒಳಗೊಳ್ಳುತ್ತದೆ. ರಾಮ ಎನ್ನುತ್ತಲೇ ಗಾಂಧೀಜಿ ಕೊಲೆಗಡುಕನ ಗುಂಡುಗಳನ್ನು ಸ್ವೀಕರಿಸಿದರು. ಆ ಮೂಲಕ ಅಹಿಂಸಾ ನೀತಿ ಪಾಲನೆಯನ್ನು ಪ್ರಾಯೋಗಿಕವಾಗಿ ತೋರಿಸಿದರು’ ಎಂದು ಪ್ರಣವ್ ವಿವರಿಸಿದರು.

***
ಸ್ವಚ್ಛ ಭಾರತ ಅಭಿಯಾನ, ಗಾಂಧೀಜಿ ಆಶಯದಂತೆ ಮನಸುಗಳನ್ನು ಸ್ವಚ್ಛಗೊಳಿಸುವ ಮಹತ್ಕಾರ್ಯದ ಆರಂಭ.
-ಪ್ರಣವ್ ಮುಖರ್ಜಿ,
ರಾಷ್ಟ್ರಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.