ADVERTISEMENT

ರಸ್ತೆ ಸಾರಿಗೆ ಸುರಕ್ಷತಾ ಮಸೂದೆ: ದಂಡ, ಶಿಕ್ಷೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 6:24 IST
Last Updated 31 ಮಾರ್ಚ್ 2015, 6:24 IST

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ–2014’ರ ಕರಡು ಪ್ರತಿಗೆ ತೀವ್ರ ವಿರೋಧ ವ್ಯಕ್ತವಾದ  ಹಿನ್ನೆಲೆಯಲ್ಲಿ, ಸಾರಿಗೆ ಸಚಿವಾಲಯ ಈ ಮಸೂದೆಯಲ್ಲಿನ ಕೆಲವು ಪ್ರಸ್ತಾವಗಳಿಗೆ ತಿದ್ದುಪಡಿ  ತರಲು ಮುಂದಾಗಿದೆ.

ಪ್ರಮುಖವಾಗಿ ಸಾರಿಗೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಕರಡು ಪ್ರತಿಯಲ್ಲಿ ಪ್ರಸ್ತಾಪಿಸಿದ್ದ  ದಂಡದ ಪ್ರಮಾಣವನ್ನು ಸಚಿವಾಲಯ ತಗ್ಗಿಸಿದೆ. ಉದಾಹರಣೆಗೆ ಕರಡಿನಲ್ಲಿ ಅತಿ ವೇಗದ ಚಾಲನೆಗೆ  ರೂ 5 ಸಾವಿರದಿಂದ ರೂ 12,500 ವರೆಗೆ ದಂಡ ವಿಧಿಸಲಾಗಿತ್ತು. ಇದನ್ನು ರೂ 1ರಿಂದ ರೂ 6 ಸಾವಿರಕ್ಕೆ ತಗ್ಗಿಸಲಾಗಿದೆ. ಮದ್ಯಪಾನ ಮಾಡಿ ಚಾಲನೆ ಮಾಡಿದರೆ ರೂ 30 ಸಾವಿರದವರೆಗೆ ದಂಡ ಮತ್ತು 12 ರಿಂದ 18 ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶ ಇತ್ತು. ಇದನ್ನು ರೂ 10 ರಿಂದ ರೂ 20ಸಾವಿರದವರೆಗ ದಂಡ 1ರಿಂದ 6 ತಿಂಗಳವರೆಗೆ ಜೈಲು ಶಿಕ್ಷೆಗೆ ತಗ್ಗಿಸಲಾಗಿದೆ. ನಿರ್ಲಕ್ಷ್ಯದ ಚಾಲನೆಯಿಂದ ಮಗುವಿನ ಸಾವಿಗೆ ಕಾರಣವಾದರೆ, ಚಾಲಕನಿಗೆ ರೂ 3 ಲಕ್ಷದವರೆಗೆ ದಂಡ ಮತ್ತು 7 ವರ್ಷ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವ ಇತ್ತು. ಇದನ್ನು ರೂ 50 ಸಾವಿರ ದಂಡ ಮತ್ತು 1 ವರ್ಷ ಸೆರೆವಾಸಕ್ಕೆ ಇಳಿಸಲಾಗಿದೆ.

ರಸ್ತೆ ಅಪಘಾತ, ನಿರ್ಲಕ್ಷ್ಯದ ಚಾಲನೆ, ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು, ಸರಕನ್ನು ವಾಹನದಲ್ಲಿ ಸಾಗಿಸುವುದು ಸೇರಿದಂತೆ ವಿವಿಧ ರಸ್ತೆ ಸಾರಿಗೆ ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡದ ಪ್ರಮಾಣವನ್ನು ತಗ್ಗಿಸಲಾಗಿದೆ. ಮಸೂದೆಯಲ್ಲಿನ ಕಠಿಣ ನಿಯಮಗಳನ್ನು ತುಸು ಸಡಿಸಲಾಗಿದೆ.

ಈ ತಿದ್ದುಪಡಿಗಳನ್ನು ಸಾರಿಗೆ ಸಚಿವಾಲಯ ಅಧಿಕೃತ ವೆಬ್‌ ತಾಣದಲ್ಲಿ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.