ADVERTISEMENT

ರಾಜಕೀಯ ಪಕ್ಷಗಳು ಆರ್‌ಟಿಐ ವ್ಯಾಪ್ತಿಗೆ ಬರಲ್ಲ

ಪಿಟಿಐ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ರಾಜಕೀಯ ಪಕ್ಷಗಳು ಸ್ವೀಕರಿಸುವ ದೇಣಿಗೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಮಾಹಿತಿ ಆಯೋಗ 2013ರಲ್ಲಿ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಆರು ರಾಷ್ಟ್ರೀಯ ಪಕ್ಷಗಳನ್ನು ಆರ್‌ಟಿಐ ವ್ಯಾಪ್ತಿ ಅಡಿ ತಂದಿತ್ತು.

ಆದರೆ, ಇದೀಗ ಚುನಾವಣಾ ಆಯೋಗದ ಈ ಹೇಳಿಕೆಯು ಮಾಹಿತಿ ಆಯೋಗದ ಆದೇಶಕ್ಕೆ ವ್ಯತಿರಿಕ್ತವಾಗಿದೆ.

ADVERTISEMENT

ಚುನಾವಣಾ ಬಾಂಡ್‌ಗಳ ಮೂಲಕ ಆರು ರಾಜಕೀಯ ಪಕ್ಷಗಳು ಸಂಗ್ರಹಿ ಸಿರುವ ಒಟ್ಟು ದೇಣಿಗೆಯ ಮೊತ್ತದ ಕುರಿತು ಮಾಹಿತಿ ನೀಡುವಂತೆ ಕೋರಿ ಪುಣೆಯ ವಿಹಾರ್‌ ಧ್ರುವೆ ಎಂಬುವರು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.

‘ರಾಜಕೀಯ ಪಕ್ಷಗಳ ದೇಣಿಗೆ ಕುರಿತು ಅರ್ಜಿದಾರರು ಕೋರಿದ ಮಾಹಿತಿ ಆಯೋಗದ ಬಳಿ ಇಲ್ಲ. ಇದು ಆಯಾ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ವಿಷಯ. ರಾಜಕೀಯ ಪಕ್ಷಗಳು ಆರ್‌ಟಿಐ ವ್ಯಾಪ್ತಿ ಅಡಿ ಬರುವುದಿಲ್ಲ’ ಎಂದು ಚುನಾವಣಾ ಆಯೋಗ  ಉತ್ತರಿಸಿದೆ.

‘ಚುನಾವಣಾ ಬಾಂಡ್‌ಗಳ ಮುಖಾಂತರ ರಾಜಕೀಯ ಪಕ್ಷಗಳು ತಾವು ಸಂಗ್ರಹಿಸಿರುವ ದೇಣಿಗೆಯ ಸಮಗ್ರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಆದರೆ, 2017–18ನೇ ಹಣಕಾಸು ವರ್ಷದ ದೇಣಿಗೆ ಮಾಹಿತಿ ಸಲ್ಲಿಸಲು ಇನ್ನೂ ಕಾಲಾವಕಾಶವಿದ್ದು, ಇದೇ ಸೆಪ್ಟೆಂಬರ್‌ 30 ಕೊನೆಯ ದಿನವಾಗಿದೆ’ ಎಂದು ಚುನಾವಣಾ ಆಯೋಗದ ಮಾಹಿತಿ ಅಧಿಕಾರಿ ತಿಳಿಸಿದ್ದಾರೆ.

ಇದಕ್ಕೆ ಆಯೋಗದ ಹಿರಿಯ ಪ್ರಧಾನ ಕಾರ್ಯದರ್ಶಿ ಕೆ.ಎಫ್‌. ವಿಲ್ಫ್ರೆಡ್‌ ಷರಾ ಬರೆದಿದ್ದಾರೆ. ಆರು ಪಕ್ಷಗಳಾದರೂ ಆರ್‌ಟಿಐ ವ್ಯಾಪ್ತಿಗೆ ಒಳಪಡುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಅವರು ಹಾರಿಕೆಯ ಉತ್ತರ ನೀಡಿದ್ದಾರೆ. ಆರು ರಾಷ್ಟ್ರೀಯ ಪಕ್ಷಗಳು ಆರ್‌ಟಿಐ ವ್ಯಾಪ್ತಿಗೆ ಒಳಪಡುತ್ತವೆ ಎಂಬ ಕೇಂದ್ರ ಮಾಹಿತಿ ಆಯೋಗದ ಆದೇಶ ಇನ್ನೂ ಜಾರಿಯಲ್ಲಿರುವಾಗ ಚುನಾವಣಾ ಆಯೋಗದ ಮಾಹಿತಿ ಅಧಿಕಾರಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್‌ ನಾಯಕ್‌ ಹೇಳಿದ್ದಾರೆ.

ಆರ್‌ಟಿಐ ವ್ಯಾಪ್ತಿಯಲ್ಲಿ ಆರು ರಾಷ್ಟ್ರೀಯ ಪಕ್ಷ

ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿ, ಎನ್‌ಸಿಪಿ, ಸಿಪಿಐ, ಸಿಪಿಎಂ ಕೇಂದ್ರ ಮಾಹಿತಿ ಆಯೋಗ 2013ರ ಜೂನ್‌ 3ರಂದು ಹೊರಡಿಸಿದ ಆದೇಶದ ಪ್ರಕಾರ ಆರ್‌ಟಿಐ ವ್ಯಾಪ್ತಿಗೆ ಒಳಪಡುತ್ತವೆ.

ಆಯೋಗದ ಈ ಆದೇಶವನ್ನು ಯಾವುದೇ ರಾಜಕೀಯ ಪಕ್ಷಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ.

ಆದರೆ, ದೇಣಿಗೆ ಸಂಗ್ರಹ ಹಾಗೂ ಇನ್ನಿತರ ವಿಷಯಗಳ ಕುರಿತು ಆರ್‌ಟಿಐ ಅಡಿ ಕೇಳಲಾದ ಪ್ರಶ್ನೆಗಳಿಗೆ ಯಾವ ರಾಜಕೀಯ ಪಕ್ಷಗಳೂ ಸಮಂಜಸ ಉತ್ತರ ನೀಡುತ್ತಿಲ್ಲ.

ಕೇಂದ್ರ ಮಾಹಿತಿ ಆಯೋಗದ ಆದೇಶ ಪಾಲಿಸದ ರಾಜಕೀಯ ಪಕ್ಷಗಳ ಈ ನಿರ್ಲಕ್ಷ್ಯ ಧೋರಣೆ ವಿರುದ್ಧ ಹಲವಾರು ಆರ್‌ಟಿಐ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಆದರೆ, ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ.

ಆರ್‌ಟಿಐ ವ್ಯಾಪ್ತಿ ಅಡಿ ಬರುವ ಸಂಸ್ಥೆಗಳ ಕುರಿತು ಕೇಂದ್ರ ಮಾಹಿತಿ ಆಯೋಗ ನಿರ್ಧರಿಸಬೇಕೇ ಹೊರತು ಚುನಾವಣಾ ಆಯೋಗವಲ್ಲ ಎನ್ನುವುದು ಅರ್ಜಿದಾರರ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.