ADVERTISEMENT

ರಾಜಾ, ಕನಿಮೊಳಿಗೆ ಸಮನ್ಸ್‌

2ಜಿ ಲೇವಾದೇವಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಮೇ 2014, 19:30 IST
Last Updated 2 ಮೇ 2014, 19:30 IST

ನವದೆಹಲಿ (ಪಿಟಿಐ): 2ಜಿ ಹಗರಣದ ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸಲ್ಲಿಸಿದ್ದ ಆರೋಪ ಪಟ್ಟಿಗಳ ಅನ್ವಯ ದೆಹಲಿಯ ನ್ಯಾಯಾಲಯವೊಂದು ಮಾಜಿ ದೂರ ಸಂಪರ್ಕ ಸಚಿವ ಎ.ರಾಜಾ, ಡಿಎಂಕೆ ಸಂಸದೆ ಕನಿಮೊಳಿ ಸೇರಿದಂತೆ ಇತರ 17 ಆರೋಪಿಗಳಿಗೆ ಶುಕ್ರವಾರ ಸಮನ್ಸ್‌ ಜಾರಿ ಮಾಡಿದೆ.

ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಮತ್ತು ದಾಖಲೆಗಳಲ್ಲಿ ‘ಅಪರಾಧವನ್ನು ಸಾಬೀತು ಮಾಡುವಂತಹ ಸಾಕಷ್ಟು ಸಾಕ್ಷ್ಯ­ಗಳಿವೆ’ ಎಂದು ಹೇಳಿದ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಪತ್ನಿ ದಯಾಳು ಅಮ್ಮಳ್‌ ಸೇರಿದಂತೆ ಎಲ್ಲಾ ಆರೋಪಿಗಳು ನ್ಯಾಯಾಲಯದ ಮುಂದೆ ಮೇ 26ಕ್ಕೆ ಹಾಜರಾಗುವಂತೆ ಸೂಚಿಸಿದರು.

‘ಸಲ್ಲಿಸಿರುವ ದಾಖಲೆಗಳನ್ನು ನಾನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇನೆ. ಸಾರ್ವ­­ಜನಿಕ ಸೇವೆಯಲ್ಲಿರುವ ವ್ಯಕ್ತಿ ದೂರು ನೀಡಿರುವುದರಿಂದ, ಅವರನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದು ಸೈನಿ ಹೇಳಿದರು.

ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿ­ದಂತೆ ಜಾರಿ ನಿರ್ದೇಶನಾಲಯವು 10 ಮಂದಿ ಹಾಗೂ 9 ಕಂಪೆನಿಗಳು ಸೇರಿ­ದಂತೆ ಎಲ್ಲಾ 19 ಆರೋಪಿಗಳ ವಿರುದ್ಧ ಏ.25ರಂದು ಆರೋಪ ಪಟ್ಟಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.