ADVERTISEMENT

ರಾಜೀವ್‌ ಹಂತಕರ ಕ್ಷಮೆ ಸಾಂವಿಧಾನಿಕ ಪೀಠಕ್ಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 19:30 IST
Last Updated 25 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ರಾಜೀವ್‌ ಗಾಂಧಿ ಹಂತಕ ರನ್ನು ಬಿಡು­ಗಡೆ ಮಾಡಲು ತಮಿಳುನಾಡು ಸರ್ಕಾರ ಕೈಗೊಂಡ ಏಕಪಕ್ಷೀಯ ನಿರ್ಧಾರ ಪ್ರಶ್ನಿಸಿ, ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು  ಸುಪ್ರೀಂ­ಕೋರ್ಟ್‌ ಸಾಂವಿ­ಧಾನಿಕ ಪೀಠದ ಪರಾಮರ್ಶೆಗೆ ಒಪ್ಪಿಸಿದೆ.

ರಾಜೀವ್‌ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಏಳೂ ಜನರನ್ನು ಬಿಡುಗಡೆ ಮಾಡಲು ತಮಿಳು ನಾಡು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ  ನೀಡಿದ್ದ   ಮಧ್ಯಾಂತರ ತಡೆಯಾಜ್ಞೆಯನ್ನೂ ಕೋರ್ಟ್‌ ಮುಂದುವರಿಸಿದೆ. 

ಸುಪ್ರೀಂಕೋರ್ಟ್‌ನ ಈ ಕ್ರಮ­ದಿಂದಾಗಿ ಈ ಪ್ರಕರಣ­ದಲ್ಲಿ ಕ್ಷಮಾದಾನ ಅರ್ಜಿ ಇತ್ಯರ್ಥ­ಗೊಳಿಸಲು ರಾಷ್ಟ್ರಪತಿ ವಿಳಂಬ­ಗೊಳಿಸಿದ್ದರಿಂದ ಮರಣ­ದಂಡನೆಯಿಂದ ವಿನಾಯಿತಿ ಪಡೆದಿದ್ದ ಶಾಂತನ್‌, ಮುರುಗನ್‌, ಪೇರರಿವಾಳನ್‌ ಹಾಗೂ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ನಳಿನಿ, ರಾಬರ್ಟ್‌ ಪಸಯ್‌, ಜಯ­ಕುಮಾರ್‌ ಮತ್ತು ರವಿಚಂದ್ರನ್‌ ಅವರ ಜೈಲುವಾಸ  ಮುಂದುವರಿಯಲಿದೆ.

ತಮ್ಮ ಅಧಿಕಾರಾವಧಿಯ ಕೊನೆಯ ದಿನ ಕೇಂದ್ರದ ಈ ಮಹತ್ವದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠದ ಮುಖ್ಯಸ್ಥ ನ್ಯಾ.

ಸದಾಶಿವಂ,   ಮಾಜಿ ಪ್ರಧಾನಿ ಹತ್ಯೆಗೆ ಸಂಬಂಧಿ­ಸಿದ ಪ್ರಕರಣ ಇದಾಗಿರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎದ್ದಿರುವ ಪ್ರಶ್ನೆಗಳು ಇಡೀ ದೇಶಕ್ಕೆ ಮಹತ್ವ­ದ್ದಾಗಿವೆ. ಅಲ್ಲದೇ ಈ ತೀರ್ಪು ದೇಶ­ದಾದ್ಯಂತ ಕ್ರಿಮಿನಲ್‌ ಪ್ರಕರಣಗಳ ಇತ್ಯರ್ಥಕ್ಕೆ ದಿಕ್ಸೂಚಿಯಾಗಲಿದೆ. ಆದ್ದರಿಂದ ಈ ಪ್ರಕರಣವನ್ನು ಉನ್ನತ ಪೀಠದ ಪರಾಮರ್ಶೆಗೆ ಒಪ್ಪಿಸಲಾಗಿದೆ’ ಎಂದು ಹೇಳಿದರು.

ಸಾಂವಿಧಾನಿಕ ಪೀಠ ಈ ಪ್ರಕರಣ­ವನ್ನು ಮೂರು ತಿಂಗಳಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದಿರುವ ಸದಾಶಿವಂ ನೇತೃತ್ವದ ನ್ಯಾಯಪೀಠ, ಆ ಪೀಠದ ಮುಂದೆ ಏಳು ಪ್ರಶ್ನೆಗಳನ್ನು ಇರಿಸಿದೆ.

ಸಾಂವಿಧಾನಿಕ ಪೀಠದ ಮುಂದೆ ಇರುವ ಪ್ರಶ್ನೆಗಳು: 
*ರಾಷ್ಟ್ರಪತಿ  (ಸಂವಿಧಾನದ 72ನೇ ವಿಧಿ) ಅಥವಾ ರಾಜ್ಯಪಾಲರು (161 ವಿಧಿ) ಇಲ್ಲವೆ ಸುಪ್ರೀಂಕೋರ್ಟ್‌ (32ನೇ ವಿಧಿ) ಒಂದು ಪ್ರಕರಣ ದಲ್ಲಿ ಕ್ಷಮಾದಾನ ನೀಡಿದ ಮೇಲೂ ಅದನ್ನು ಮತ್ತಷ್ಟು ಕಡಿಮೆ ಮಾಡಲು ಕಾರ್ಯಾಂಗಕ್ಕೆ (ಕೇಂದ್ರ, ರಾಜ್ಯ ಸರ್ಕಾರ) ಅಧಿಕಾರ ಇದೆಯೇ?

*ಮರಣದಂಡನೆಯಿಂದ ವಿನಾಯ್ತಿ ಪಡೆದು ಜೀವಾವಧಿ ಶಿಕ್ಷೆ ಅನುಭವಿ­ಸುತ್ತಿರುವ ಅಪರಾಧಿ ಗಳನ್ನು ರಾಜ್ಯ ಸರ್ಕಾರ ಆದೇಶ ಹೊರಡಿಸಿ ಅವರನ್ನು ಬಂಧಮುಕ್ತರನ್ನಾಗಿಸಲು ಅವಕಾಶ ಇದೆಯೇ?

*ಜೀವಾವಧಿ ಶಿಕ್ಷೆ ಎಂದರೆ ಅಪರಾಧಿಯ ಜೀವ ಇರುವವರೆಗೆ ಸೆರೆವಾಸವೇ ಅಥವಾ ಜೀವಾವಧಿ ಶಿಕ್ಷೆಯೂ ಕ್ಷಮಾದಾನದ ಅಡಿಯಲ್ಲಿ ಬರುವುದೇ?  

*ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿದ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ, ಅಂತಹ ಅಪರಾಧಿಗಳ   ಶಿಕ್ಷೆಯನ್ನು ಆಜೀವ ಸೆರೆ ವಾಸ ಎಂದು ಪರಿಗಣಿಸಬೇಕೇ?  ಇಲ್ಲವೇ ಅದನ್ನು 14ವರ್ಷಗಳಿಗೂ ಮೀರಿದ ಜೈಲು ಶಿಕ್ಷೆ ಎಂದು ನಿರ್ಧರಿಸಬೇಕೇ? ಅಥವಾ ಇದು ಬಿಡುಗಡೆಗೆ ಅತೀತ­ವಾದ  ಪ್ರಕರಣ ಎಂದು ಪರಿಗಣಿಸಬೇಕೇ ಎಂಬುದರ ಕುರಿತೂ ನ್ಯಾಯಪೀಠ ತೀರ್ಮಾನಿಸಲಿದೆ.

*ಸಂವಿಧಾನದ ಏಳನೇ ಪರಿಚ್ಛೇದ­ದಲ್ಲಿ ಉಲ್ಲೇಖವಾಗಿರುವ ಕೇಂದ್ರ ಮತ್ತು ರಾಜ್ಯಗಳ ಸಹವರ್ತಿ ಪಟ್ಟಿ­ಯಲ್ಲಿ ನೀಡಲಾಗಿರುವ ಕ್ಷಮಾ ದಾನದ ಅಧಿಕಾರ ಚಲಾಯಿಸುವ ಹಕ್ಕು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದೆಯೇ ಎಂಬು­ದನ್ನೂ ನ್ಯಾಯಪೀಠ ಚರ್ಚಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.