ADVERTISEMENT

ರಾಜ್ಯಪಾಲರ ನೇಮಕ ವಿಳಂಬ?

​ಪ್ರಜಾವಾಣಿ ವಾರ್ತೆ
Published 27 ಜೂನ್ 2014, 20:05 IST
Last Updated 27 ಜೂನ್ 2014, 20:05 IST

ನವದೆಹಲಿ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿ­ಸಲು ಕೇಂದ್ರ ಸರ್ಕಾರ ಇನ್ನೂ ಕೆಲ ಸಮಯ ತೆಗೆದುಕೊಳ್ಳುವ ಸಾಧ್ಯತೆ­ಯಿದೆ. ಶನಿವಾರ ಎಚ್‌.ಆರ್. ಭಾರ­ದ್ವಾಜ್‌ ನಿವೃತ್ತಿ ಹೊಂದಲಿದ್ದು, ತಮಿಳು­ನಾಡು ರಾಜ್ಯಪಾಲ ಕೆ. ರೋಸಯ್ಯ ಅವ­ರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಯುಪಿಎ ಸರ್ಕಾರದಲ್ಲಿ ನೇಮಕ­ಗೊಂಡಿ­ರುವ ರಾಜ್ಯಪಾಲರ ಪೈಕಿ ಅನೇ­ಕರು ಈಗಾಗಲೇ ರಾಜೀನಾಮೆ ನೀಡಿ­ದ್ದಾರೆ. ಭಾರದ್ವಾಜ್‌, ತ್ರಿಪುರಾ ರಾಜ್ಯಪಾಲ ದೇವಾನಂದ ಕೊನ್ವರ್‌ ಅವಧಿ ಶನಿವಾರ ಮುಗಿಯಲಿದೆ. ನಾಗಾಲ್ಯಾಂಡ್‌ ರಾಜ್ಯಪಾಲ ಅಶ್ವಿನಿ ಕುಮಾರ್‌ ಸಲ್ಲಿಸಿರುವ ರಾಜೀನಾಮೆ­ಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ  ಅಂಗೀಕರಿಸಿದ್ದಾರೆ.

ಈ ಮೂರು ಹುದ್ದೆಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದು ರೋಸಯ್ಯ ಅವರಿಗೆ ಕರ್ನಾಟಕ, ಮಿಜೋರಾಂ ರಾಜ್ಯಪಾಲ ವಕ್ಕಂ ಪುರುಷೋತ್ತಮನ್‌ ಅವರಿಗೆ ತ್ರಿಪುರಾ ಮತ್ತು ಮೇಘಾಲಯ ರಾಜ್ಯ­ಪಾಲ ಕೆ.ಕೆ. ಪಾಲ್‌ ಅವರಿಗೆ ನಾಗಾ­ಲ್ಯಾಂಡ್‌ ಹೊಣೆಯನ್ನು ಹೆಚ್ಚು­ವರಿ­ಯಾಗಿ ನೀಡಲಾಗಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ, ಉತ್ತರ ಪ್ರದೇಶದ  ಬಿ.ಎಲ್‌. ಜೋಶಿ, ಛತ್ತೀಸಗಡದ ಶೇಖರ್‌ ದತ್‌ ತಮ್ಮ ಸ್ಥಾನಗಳನ್ನು ತ್ಯಜಿಸಿ­ದ್ದಾರೆ.

ಸರ್ಕಾರ ಕೇಳಿದರೆ ರಾಜೀನಾಮೆ ನೀಡುವುದಾಗಿ ಗೋವಾ ರಾಜ್ಯಪಾಲ ಬಿ.ವಿ. ವಾಂಚೂ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾ­ಯಣನ್‌  ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕರನ್ನು ರಾಜ್ಯಪಾಲರ ಹುದ್ದೆಗಳಿಗೆ ನೇಮಕ ಮಾಡಲು ಸರ್ಕಾರ ಆಲೋಚಿಸಿದೆ. ಕರ್ನಾಟಕ ರಾಜ್ಯಪಾಲರ ಸ್ಥಾನಕ್ಕೆ ಒ. ರಾಜಗೋಪಾಲ್‌, ವಿ.ಕೆ. ಮಲ್ಹೋತ್ರಾ ಅವರ ಹೆಸರು ಪರಿಶೀಲನೆಯಲ್ಲಿವೆ. ಬೇರೆ ರಾಜ್ಯಗಳಿಗೆ ಕಲ್ಯಾಣ್‌ಸಿಂಗ್‌ ಮತ್ತು ಲಾಲ್‌ಜಿ ಟಂಡನ್‌ ಹೆಸರು ಚಲಾವಣೆಯಲ್ಲಿವೆ.

ಬಜೆಟ್‌ಗೆ ಮುನ್ನ ನೇಮಕ
ಜುಲೈ ಏಳರಿಂದ ಆರಂಭವಾಗುವ ಸಂಸತ್ತಿನ ಬಜೆಟ್‌ ಅಧಿವೇಶನಕ್ಕೆ ಮೊದಲು ಕೆಲವು ಹೊಸ ರಾಜ್ಯ­ಪಾಲರು ನೇಮಕಗೊಳ್ಳುವ ಸಂಭವ­ವಿದೆ ಎಂದು ಕೇಂದ್ರ ಸರ್ಕಾರ ಶುಕ್ರ­ವಾರ ಪರೋಕ್ಷವಾಗಿ ಹೇಳಿದೆ.

ರಾಜ್ಯ­ಪಾಲರ ನೇಮಕಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ವಿಷಯವನ್ನು ತಳ್ಳಿಹಾಕುವುದಿಲ್ಲ. ಆದರೆ, ಈ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ನಿಮಗೆ ಸ್ಪಷ್ಟ ಚಿತ್ರಣವನ್ನು ಕೊಡಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದರು.

ಭಾರದ್ವಾಜ್‌ ಅಧಿಕಾರಾವಧಿ ಇಂದು ಅಂತ್ಯ
ಬೆಂಗಳೂರು: ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಅವರ ಅಧಿಕಾರಾವಧಿ ಶನಿವಾರ (ಜೂನ್‌ 28) ಕೊನೆಗೊಳ್ಳಲಿದೆ. ಅವರು ಶನಿವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ನವದೆಹಲಿಗೆ ವಾಪಸಾಗಲಿದ್ದಾರೆ.

ಆದರೆ ಸರ್ಕಾರದ ವತಿಯಿಂದ  ಅವರಿಗೆ ಈಗ ಬೀಳ್ಕೊಡುಗೆ  ಆಯೋಜಿಸಿಲ್ಲ. ಇನ್ನೊಂದು ದಿನ ಬೀಳ್ಕೊಡುಗೆ ನೀಡುವ ಇರಾದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎಂದು ಗೊತ್ತಾಗಿದೆ.

ಉಸ್ತುವಾರಿ ವಹಿಸಿಕೊಳ್ಳಲಿರುವ ತಮಿಳುನಾಡು ರಾಜ್ಯಪಾಲ ಕೆ. ರೋಸಯ್ಯ ಶನಿವಾರ ರಾತ್ರಿಯೇ ಬೆಂಗಳೂರಿಗೆ ಬರಲಿದ್ದಾರೆ. ಭಾನುವಾರ ಬೆಳಗ್ಗೆ 9 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಂದೇ ಬೆಳಗ್ಗೆ 11.30ಕ್ಕೆ ತಮಿಳುನಾಡಿಗೆ ವಾಪಸಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT