ADVERTISEMENT

‘ರಾಜ್ಯಸಭೆ ಚುನಾವಣೆಗೆ ಷಾ ತಂತ್ರ’

ಗುಜರಾತ್‌: 3 ಶಾಸಕರು ಕಾಂಗ್ರೆಸ್‌ ತೊರೆದು ಬಿಜೆಪಿಗೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 20:14 IST
Last Updated 27 ಜುಲೈ 2017, 20:14 IST
‘ರಾಜ್ಯಸಭೆ ಚುನಾವಣೆಗೆ ಷಾ ತಂತ್ರ’
‘ರಾಜ್ಯಸಭೆ ಚುನಾವಣೆಗೆ ಷಾ ತಂತ್ರ’   

ನವದೆಹಲಿ: ಗುಜರಾತ್ ಕಾಂಗ್ರೆಸ್‌ನ ಮೂವರು ಶಾಸಕರು ತಮ್ಮ ಶಾಸಕತ್ವಕ್ಕೆ ಗುರುವಾರ ರಾಜೀನಾಮೆ ನೀಡಿದ್ದು ಬಿಜೆಪಿ ಸೇರಿದ್ದಾರೆ.

ಗುಜರಾತ್‌ನಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಆಗಸ್ಟ್‌ 8ರಂದು ಚುನಾವಣೆ ನಡೆಯಬೇಕಿರುವುದರಿಂದ ಈ ಬೆಳವಣಿಗೆ ಕಾಂಗ್ರೆಸ್‌ಗೆ ಬಾರಿ ಹೊಡೆತ ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ‘ರಾಜ್ಯ ಕಾಂಗ್ರೆಸ್‌ನಲ್ಲಿನ ಈ ಬೆಳವಣಿಗೆ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ತಂತ್ರ ಇದೆ’ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.

ಬಲವಂತ್‌ಸಿಂಹ ರಜಪೂತ್, ತೇಜಶ್ರೀಬೆನ್ ಪಟೇಲ್ ಮತ್ತು ಪ್ರಹ್ಲಾದ್‌ ಪಟೇಲ್‌ ಕಾಂಗ್ರೆಸ್ ತೊರೆದವರು. ವಾರದ ಹಿಂದಷ್ಟೇ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷನ ಸ್ಥಾನ ಮತ್ತು ವಿರೋಧ ಪಕ್ಷದ ಸ್ಥಾನವನ್ನು ಶಂಕರಸಿಂಹ ವಾಘೆಲಾ ತೊರೆದಿದ್ದರು. ಈ ಮೂವರೂ ವಾಘೆಲಾ ಅವರ ಆಪ್ತರು. ಬಲವಂತ್‌ಸಿಂಹ ಅವರು ವಾಘೆಲಾ ಅವರ ಸಂಬಂಧಿಕರೂ ಹೌದು.

ADVERTISEMENT

ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಅಹಮದ್ ಪಟೇಲ್, ಬಿಜೆಪಿಯ ಸ್ಮೃತಿ ಇರಾನಿ ಮತ್ತು  ದಿಲೀಪ್ ಭಾಯಿ ಪಾಂಡ್ಯ ಅವರ ಅವಧಿ ಆಗಸ್ಟ್ 18ಕ್ಕೆ ಮುಗಿಯುತ್ತದೆ. ಈ ಮೂರು ಸ್ಥಾನಗಳಿಗೆ ಆಗಸ್ಟ್ 8 ರಂದು ಚುನಾವಣೆ ನಡೆಯಲಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ನಾಮಪತ್ರ ಸಲ್ಲಿಸಿದ್ದಾರೆ. ‘ಅಹಮದ್ ಪಟೇಲ್‌ ನಾಮಪತ್ರ ಸಲ್ಲಿಸುವವರೆಗೂ ಕಾದು, ಈ ಮೂವರೂ ರಾಜೀನಾಮೆ ನೀಡುವಂತೆ ಷಾ ತಂತ್ರ ರೂಪಿಸಿದ್ದರು. ಅಮಿತ್ ಷಾ ಮತ್ತು ಅಹಮದ್ ಪಟೇಲ್ ರಾಜಕೀಯ ವೈರಿಗಳು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ, ಅಹಮದ್ ಕಾರಣಕ್ಕೇ, ಇಶ್ರತ್ ಜಹಾಂ ಎನ್‌ಕೌಂಟರ್‌ ಪ್ರಕರಣದಲ್ಲಿ ಷಾ ಜೈಲಿಗೆ ಹೋಗಬೇಕಾಯಿತು. ಹೀಗಾಗಿ ಪಟೇಲ್ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುವುದು ಷಾಗೆ ಬೇಕಿಲ್ಲ’ ಎಂದು ಮೂಲಗಳು ಹೇಳಿವೆ.

‘ಬಿಜೆಪಿಯಿಂದ ಷಾ ಮತ್ತು ಸ್ಮೃತಿ ಇರಾನಿ ಆಯ್ಕೆಯಾಗುವುದು ಖಚಿತವಾಗಿದೆ. ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿ ಬಲವಂತ್‌ಸಿಂಹ ಅವರು ಸ್ಪರ್ಧಿಸಲಿದ್ದಾರೆ. ಸದ್ಯ ಅಹಮದ್ ಪಟೇಲ್ ಅವರು ಸುಲಭವಾಗಿ ಆಯ್ಕೆಯಾಗುವಷ್ಟು  ಶಾಸಕರ ಬಲ ಕಾಂಗ್ರೆಸ್ ಬಳಿ ಇದೆ. ಆದರೆ, ರಾಜ್ಯ ಕಾಂಗ್ರೆಸ್‌ನಲ್ಲಿ ವಾಘೆಲಾ ಆಪ್ತರು ಬಹಳ ಮಂದಿ ಇದ್ದಾರೆ. ಅವರೆಲ್ಲರ ಮತ ಬಲವಂತ್‌ಸಿಂಹ ಅವರಿಗೇ ಬರಲಿದೆ’ ಎಂದು ಬಿಜೆಪಿ ಮೂಲಗಳು ವಿವರಿಸಿವೆ.

‘ರಾಜ್ಯಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಮತ್ತಷ್ಟು ಶಾಸಕರು ಪಕ್ಷ ತೊರೆದು, ಬಿಜೆಪಿ ಸೇರಲಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಾಸಕರು ಎನ್‌ಡಿಎ ಅಭ್ಯರ್ಥಿಗೆ ಅಡ್ಡಮತ ಹಾಕಿದ್ದೂ, ಇದನ್ನೇ ಸೂಚಿಸುತ್ತದೆ’ ಎಂದು ಅವು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.