ADVERTISEMENT

ರಾಯ್‌ ಬಂಧನ ಪೂರ್ವಯೋಜಿತ: ಸಹಾರಾ ಆಪಾದನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ನವದೆಹಲಿ: ಸುಪ್ರೀಂ ಕೋರ್ಟ್‌ ವಿರುದ್ಧ ಗಂಭೀರ ಟೀಕೆ ಮಾಡಿರುವ ಸಹಾರಾ ಸಮೂಹ, ತನ್ನ ಉದ್ದಿಮೆಗಳ ಮುಖ್ಯಸ್ಥ ಸುಬ್ರತೊ ರಾಯ್ ಅವರನ್ನು ಜೈಲಿಗೆ ಕಳುಹಿಸಿರುವುದು ಪೂರ್ವಯೋಜಿತ ಎಂದು ಆಪಾದಿಸಿದೆ.

ರಾಯ್‌ ಅವರನ್ನು ಜೈಲಿಗೆ ಕಳುಹಿಸಿದ ಸುಪ್ರೀಂ­ಕೋರ್ಟ್‌ (ಮಾರ್ಚ್‌ 4) ಆದೇಶದ ಕಾನೂನು ಬದ್ಧತೆಯನ್ನು  ಸಹಾರಾ ಪರ ವಕೀಲ ರಾಜೀವ್‌ ಧವನ್‌ ಅವರು ಪ್ರಕರಣದ  ವಿಚಾರಣೆ ನಡೆಸುತ್ತಿ­ರುವ ನ್ಯಾಯಮೂರ್ತಿಗಳಾದ ಕೆ.ಎಸ್‌. ರಾಧಾಕೃಷ್ಣನ್‌ ಮತ್ತು ಜೆ.ಎಸ್‌.ಖೆಹರ್‌ ಅವರ ನ್ಯಾಯಪೀಠದ ಮುಂದೆ ಬುಧವಾರ ಪ್ರಶ್ನಿಸಿದರು.

‘ರಾಯ್ ಬಂಧನಕ್ಕೆ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದ್ದ ಸುಪ್ರೀಂಕೋರ್ಟ್‌, ಅವರನ್ನು ಜೈಲಿಗೆ ತಳ್ಳುವ ಆದೇಶವನ್ನು ಮೊದಲೇ ಸಿದ್ಧ ಮಾಡಿ ಇರಿಸಿಕೊಂಡಿತ್ತು. ವಿಚಾರಣೆ ವೇಳೆ ಅದನ್ನು ಔಪಚಾರಿಕವಾಗಿ ಪ್ರಕಟಿಸಿತಷ್ಟೇ. ಸುಪ್ರೀಂಕೋರ್ಟ್‌ ಆಗಲಿ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಆಗಲಿ ರಾಯ್‌ ಅವರ ವಿಷಯದಲ್ಲಿ ನ್ಯಾಯೋಚಿತವಾಗಿ ನಡೆದುಕೊಂಡಿಲ್ಲ’ ಎಂದು ಆಕ್ಷೇಪಿಸಿದರು.

ಈ ಟೀಕೆಗೆ ಸ್ಪಂದಿಸಿದ ನ್ಯಾಯಪೀಠ, ‘ಇಂತಹ ಟೀಕೆಗಳಿಂದ ಸುಪ್ರೀಂ ಕೋರ್ಟ್‌ ಪ್ರಚೋದನೆಗೆ ಒಳಗಾಗದು’ ಎಂದು ಹೇಳಿತು.
‘ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಪೀಠ ಈ ಪ್ರಕರಣದಲ್ಲಿ ಬಹಳ ಕಠಿಣ ನಿಲುವು ತಳೆದಿದ್ದ ಕಾರಣ ಪೀಠದ ಎದುರು ವಾದ ಮಂಡಿಸುವುದು ಕಷ್ಟವೇ ಆಯಿತು. ‘ಸೆಬಿ’ ಹೇಳಿದ್ದೆಲ್ಲವೂ ಸರಿ, ನಮ್ಮ ವಾದವೆಲ್ಲವೂ ತಪ್ಪು ಎನ್ನುವಂತಹ ಧೋರಣೆ ನ್ಯಾಯಪೀಠಕ್ಕೆ ಇತ್ತು. ಕೋರ್ಟ್‌ ನೀಡಿದ್ದ ಆದೇಶವನ್ನು ಕಕ್ಷಿದಾರರು ತಾಂತ್ರಿಕವಾಗಿ ಉಲ್ಲಂಘಿಸಿ­ರಬಹುದು. ಆದರೆ, ಅದು ಉದ್ದೇಶಪೂರ್ವಕವಲ್ಲ’ ಎಂದರು.

‘ಸುಬ್ರತೊ ರಾಯ್‌ ಮತ್ತು ಸಹಾರಾ ಕಂಪೆನಿಗಳ ನಿರ್ದೇಶಕರಾದ ರವಿಶಂಕರ್‌ ದುಬೆ ಹಾಗೂ ಅಶೋಕ್‌ ರಾಯ್‌ ಚೌಧರಿ ಅವರನ್ನು ತಿಹಾರ್‌ ಜೈಲಿಗೆ ಕಳುಹಿಸಿಲು ಕಾನೂನು ಸಮ್ಮತಿಸುವುದಿಲ್ಲ. ಆದರೆ, ನ್ಯಾಯಪೀಠವು ನ್ಯಾಯೋಚಿತವಲ್ಲದ ಆದೇಶ­ವನ್ನು ಹೊರಡಿಸಿತು. ಈ ಆದೇಶವನ್ನು ಮಾರ್ಪಡಿ­ಸುವಂತೆ ನಾವು ಹಲವು ಸಲ ಮನವಿ ಮಾಡಿದರೂ, ಈ ಪ್ರಯತ್ನ ಸಫಲವಾಗಲಿಲ್ಲ’ ಎಂದರು.

‘ಜನರು ಜೈಲಿನಲ್ಲಿದ್ದುಕೊಂಡು ವ್ಯಾಪಾರ– ವಹಿ­ವಾಟು ನಡೆಸಲಾಗದು. ಬ್ಯಾಂಕ್‌ನ ಉಳಿತಾಯ ಖಾತೆ­ಗಳನ್ನು ಮುಟ್ಟುಗೋಲು ಹಾಕಿಕೊಂಡರೆ ಮತ್ತು ಆಸ್ತಿ­ಪಾಸ್ತಿಗಳು ಕೋರ್ಟ್‌ನ ಅಧೀನಕ್ಕೆ ಒಳಪಟ್ಟರೆ ಹೇಗೆ ತಾನೆ ವ್ಯಾಪಾರ– ವಹಿವಾಟು ನಡೆಸಲು ಸಾಧ್ಯ’ ಎಂಬ ಪ್ರಶ್ನೆಯನ್ನು ಧವನ್ ಅವರು ನ್ಯಾಯಪೀಠದ ಮುಂದಿರಿಸಿದರು.

ಇದಕ್ಕೆ ಉತ್ತರಿಸಿದ ಪೀಠ, ‘ಜಾಮೀನು ಮಂಜೂರು ಮಾಡಲು ರೂ. 10 ಸಾವಿರ ಕೋಟಿ ಭದ್ರತೆ ಇರಿಸುವಂತೆ ವಿಧಿಸಿದ್ದ ಷರತ್ತು ಮತ್ತು ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲು ನೀಡಿದ್ದ ಆದೇಶ ಸಡಿಲಗೊಳಿಸುವು­ದಾಗಿ ಹೇಳಿದ್ದೆವು’ ಎಂದು ತಿಳಿಸಿತು.

‘ಸಹಾರಾ’ ಹೊಸ ಪ್ರಸ್ತಾವ
ಕಾರಾಗೃಹದಲ್ಲಿರುವ ತನ್ನ ಮುಖ್ಯಸ್ಥ ಸುಬ್ರತೊ ರಾಯ್‌ ಹಾಗೂ ಇಬ್ಬರು ನಿರ್ದೇ­ಶಕ­ರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಾಲ್ಕು ದಿನದೊಳಗೆ ರೂ. 2,500 ಕೋಟಿ ಹಾಗೂ ಉಳಿದ ರೂ. 2,500 ಕೋಟಿ ನಗದನ್ನು 60 ದಿನಗಳ ಒಳಗೆ ನೀಡಲು ಸಿದ್ಧ ಎಂದು ‘ಸಹಾರಾ’ ಸಮೂಹ ಗುರುವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ನ್ಯಾ. ಕೆ.ಎಸ್‌. ರಾಧಾಕೃಷ್ಣನ್‌ ಹಾಗೂ ನ್ಯಾ. ಜೆ.ಎಸ್‌. ಖೇಹರ್‌ ಅವರನ್ನು ಒಳ­ಗೊಂಡ ಸುಪ್ರೀಂಕೋರ್ಟ್ ಪೀಠದ ಮುಂದೆ ವಕೀಲ ರಾಮ್‌ ಜೇಠ್ಮಲಾನಿ ಅವರು ಸಹಾರಾ ಕಂಪೆನಿ ಪರವಾಗಿ ಈ ಪ್ರಸ್ತಾವ  ಮುಂದಿ­ಟ್ಟರು. ಜಾಮೀನು ನೀಡಲು ಕೋರ್ಟ್ ತಿಳಿಸಿದಂತೆ ರೂ. 5,000 ಕೋಟಿ ಮೊತ್ತದ ಬ್ಯಾಂಕ್‌ ಭದ್ರತೆ ಸಹ ನೀಡಲಾಗುತ್ತಿದ್ದು 90 ದಿನದ ಕಾಲಾವಕಾಶಕ್ಕೆ ಸಹಾರಾ ಸಮೂಹ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT