ADVERTISEMENT

ರಾಷ್ಟ್ರದ ಭದ್ರತೆಗೆ ಬದ್ಧ: ರಾಜ್‌ನಾಥ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2014, 10:15 IST
Last Updated 9 ಅಕ್ಟೋಬರ್ 2014, 10:15 IST

ಜಮ್ಮು(ಪಿಟಿಐ): ‘ಪಾಕಿಸ್ತಾನದ ತೀವ್ರದಾಳಿಗೆ ರಕ್ಷಣಾ ಪಡೆಗಳು ಸೂಕ್ತ ಉತ್ತರ ನೀಡುತ್ತಿದ್ದು, ರಾಷ್ಟ್ರ ಯಾರಿಗೂ ತಲೆಬಾಗುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್ ಅವರು ಗುರುವಾರ ತಿಳಿಸಿದ್ದಾರೆ.

‘ರಾಷ್ಟ್ರದ ಭದ್ರತೆ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜನರಿಗೆ ಆಶ್ವಾಸನೆ ನೀಡುತ್ತೇನೆ’ ಎಂದು ಸಿಂಗ್‌ ಅವರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಶೀಘ್ರವೇ ಎಲ್ಲವೂ ಸರಿಹೋಗಲಿದೆ’ ಎಂದು ಗಡಿಯಲ್ಲಿ ನಡೆಯುತ್ತಿರುವ ಗುಂಡಿನ ದಾಳಿ ಕುರಿತು ಬುಧವಾರ ಒತ್ತಿ ಹೇಳಿದ್ದರು.

‘ಭಾರತೀಯ ಸೇನಾ ಪಡೆ ಯೋಧರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ಅದರ ಬಗ್ಗೆ ತೃಪ್ತಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ’ ಎಂದು ಕದನ ವಿರಾಮ ಉಲ್ಲಂಘನೆ ಕುರಿತು ವಿರೋಧ ಪಕ್ಷದವರು ಕೇಳಿದ ಪ್ರಶ್ನೆಗೆ ಸಿಂಗ್ ಅವರು ಉತ್ತರಿಸಿದರು.

ADVERTISEMENT

ಪಾಕಿಸ್ತಾನ ಮತ್ತು ಭಾರತದ ನಡುವೆ ಭಾರಿ ಪ್ರಮಾಣದಲ್ಲಿ ದಾಳಿ–ಪ್ರತಿದಾಳಿ ನಡೆಯುತ್ತಿದೆ. ಜಮ್ಮು ಗಡಿ ಪ್ರದೇಶದಲ್ಲಿನ ಸುಮಾರು 60 ಹೊರಠಾಣೆಗಳನ್ನು ಗುರಿಯಾಗಿಸಿಕೊಂಡು ಪಾಕ್‌ ಸೇನೆ ದಾಳಿ ನಡೆಸುತ್ತಿದೆ. ಬುಧವಾರ ಇಡೀ ರಾತ್ರಿ ನಡೆದ ದಾಳಿಯಲ್ಲಿ ಮೂವರು ಬಿಎಸ್‌ಎಫ್‌ ಯೋಧರು ಸೇರಿದಂತೆ ಎಂಟು ಮಂದಿ ಭಾರತೀಯರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.