ADVERTISEMENT

ರಾಷ್ಟ್ರಪತಿಗಾಗಿ ವಿಮಾನ ವಿಳಂಬ: ವೈದ್ಯೆ ಆಕ್ರೋಶ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

ನವದೆಹಲಿ: ರಾಷ್ಟ್ರಪತಿ ಅವರಿಂದಾಗಿ ವಿಮಾನ ಹಾರಾಟ ವಿಳಂಬವಾಗಿದ್ದರಿಂದ ಕೇಂದ್ರ ಸಚಿವ ಕೆ.ಜೆ.ಅಲ್ಪೋನ್ಸ್‌ ಅವರು ಇಂಫಾಲ್‌ ವಿಮಾನ ನಿಲ್ದಾಣದಲ್ಲಿ ವೈದ್ಯೆಯೊಬ್ಬರ ಆಕ್ರೋಶಕ್ಕೆ ತುತ್ತಾದ ಪ್ರಸಂಗ ನಡೆದಿದೆ.

ಮಂಗಳವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಇಂಫಾಲ್‌ಗೆ ಭೇಟಿ ನೀಡಿದ್ದರಿಂದ ಕೆಲವು ವಿಮಾನಗಳ ಹಾರಾಟ ವಿಳಂಬವಾಗಿತ್ತು.

ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವೈದ್ಯೆ ನಿರಾಲಾ ಪಟ್ನಾಗೆ ತೆರಳಬೇಕಾಗಿತ್ತು. ಆದರೆ, ವಿಮಾನ ಹಾರಾಟ ವಿಳಂಬವಾಗಿದ್ದರಿಂದ ಅಸಮಾಧಾನಗೊಂಡಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಸಚಿವ ಅಲ್ಪೋನ್ಸ್‌ ಮುಂದೆ ತಮ್ಮ ಆಕ್ರೋಶವನ್ನು ಹೊರಹಾಕಿದರು. ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಪೋನ್ಸ್‌ ಅವರು, ‘ಇದು ವಿವಾದವೇ ಅಲ್ಲ. ವೈದ್ಯೆಯ ಸಂಕಟವನ್ನು ಅರ್ಥ ಮಾಡಿಕೊಂಡಿದ್ದೇನೆ. ಅವರನ್ನು ದೂರುವುದರಲ್ಲಿ ಅರ್ಥವಿಲ್ಲ. ರಾಷ್ಟ್ರಪತಿ ಅವರ ವಿಮಾನ ಇಳಿಯುವಾಗ ಯಾವುದೇ ವಿಮಾನ ಹಾರಾಟಕ್ಕೆ ಅವಕಾಶ ನೀಡುವುದಿಲ್ಲ. ರಾಷ್ಟ್ರಪತಿ ಮತ್ತು ಪ್ರಧಾನಿ ಬಿಟ್ಟು ಉಳಿದವರಿಗೆ ಇಂತಹ ವಿಶೇಷ ಶಿಷ್ಟಾಚಾರ ಇಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.