ADVERTISEMENT

ರಾಷ್ಟ್ರಪತಿ ಚುನಾವಣೆ: ಮೀರಾ ನಾಮಪತ್ರ ಸಲ್ಲಿಕೆ

‘ಪ್ರಜಾಸತ್ತಾತ್ಮಕ ಮೌಲ್ಯಗಳು, ಬಡತನ ನಿರ್ಮೂಲನೆ, ಪಾರದರ್ಶಕತೆ ಮತ್ತು ಜಾತಿ ವ್ಯವಸ್ಥೆಯ ನಿವಾರಣೆ ನಮ್ಮ ಸಿದ್ಧಾಂತ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 19:31 IST
Last Updated 28 ಜೂನ್ 2017, 19:31 IST
ಸಂಸತ್‌ ಭವನದಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್‌ ಮತ್ತು ಚುನಾವಣಾಧಿಕಾರಿಯಾಗಿರುವ ಲೋಕಸಭೆ ಮಹಾಪ್ರಧಾನ ಕಾರ್ಯದರ್ಶಿ ಅನೂಪ್‌ ಮಿಶ್ರಾ ಅವರು ಪರಸ್ಪರ ನಮಸ್ಕರಿಸಿದರು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಜರಿದ್ದರು       –ಪಿಟಿಐ ಚಿತ್ರ
ಸಂಸತ್‌ ಭವನದಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್‌ ಮತ್ತು ಚುನಾವಣಾಧಿಕಾರಿಯಾಗಿರುವ ಲೋಕಸಭೆ ಮಹಾಪ್ರಧಾನ ಕಾರ್ಯದರ್ಶಿ ಅನೂಪ್‌ ಮಿಶ್ರಾ ಅವರು ಪರಸ್ಪರ ನಮಸ್ಕರಿಸಿದರು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಜರಿದ್ದರು –ಪಿಟಿಐ ಚಿತ್ರ   

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಮೀರಾ ಕುಮಾರ್‌ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ವಿರೋಧ ಪಕ್ಷಗಳ ಮುಖಂಡರು ಜತೆಗಿದ್ದರು.

‘ಸಿದ್ಧಾಂತಕ್ಕಾಗಿ ನಮ್ಮ ಹೋರಾಟ ಈಗ ಆರಂಭವಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು, ಎಲ್ಲರ ಒಳಗೊಳ್ಳುವಿಕೆ, ಬಡತನ ನಿರ್ಮೂಲನೆ, ಪಾರದರ್ಶಕತೆ ಮತ್ತು ಜಾತಿ ವ್ಯವಸ್ಥೆಯ ನಿವಾರಣೆ ನಮ್ಮ ಸಿದ್ಧಾಂತವಾಗಿದೆ’ ಎಂದು ನಾಮಪತ್ರ ಸಲ್ಲಿಕೆ ನಂತರ ಮೀರಾ ಕುಮಾರ್‌ ಹೇಳಿದರು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಸಿಪಿಎಂ ಮುಖ್ಯಸ್ಥ ಸೀತಾರಾಮ್‌ ಯೆಚೂರಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಮುಖಂಡರಲ್ಲಿ ಸೇರಿದ್ದಾರೆ.

ADVERTISEMENT

ಮತ ಹಾಕುವಾಗ ‘ಒಳಮನಸ್ಸಿನ ಕರೆ’ಯನ್ನು ಆಲಿಸಿ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಮೀರಾ ಪುನರುಚ್ಚರಿಸಿದರು. ದಲಿತರು ಮತ್ತು ಶೋಷಣೆಗೆ ಒಳಗಾದವರನ್ನು ವಿರೋಧಿಸುವವವರ ಸಿದ್ಧಾಂತವನ್ನು ಆಯ್ಕೆ ಮಾಡಿಕೊಳ್ಳಬೇಕೇ ಅಥವಾ ದಲಿತರ ಜತೆಗಿರುವ ಮತ್ತು ಅವರಿಗಾಗಿ ಹೋರಾಡುವವರ ಸಿದ್ಧಾಂತವನ್ನು ಆಯ್ಕೆ ಮಾಡಬೇಕೇ ಎಂಬುದನ್ನು ಮತ ಹಾಕುವವರು ನಿರ್ಧರಿಸಬೇಕು ಎಂದು ಮೀರಾ ಹೇಳಿದರು.

ನಾಮಪತ್ರ ಸಲ್ಲಿಸುವುದಕ್ಕೆ ಮೊದಲು ಮೀರಾ ಅವರು ಮಹಾತ್ಮ ಗಾಂಧಿ ಅವರ ಸ್ಮಾರಕ ರಾಜಘಾಟ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಅವರು ತಮ್ಮ ತಂದೆ, ದಲಿತ ನಾಯಕ ಜಗಜೀವನ್‌ರಾಂ ಅವರ ಸಮಾಧಿ ಇರುವ ಸಮತಾ ಸ್ಥಳಕ್ಕೆ ಭೇಟಿ ನೀಡಿದರು.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌, ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಹಾಜರಿರಲಿಲ್ಲ. ಅವರ ಪಕ್ಷದ ಪ್ರತಿನಿಧಿಗಳು ಮೀರಾ ಅವರ ಜತೆಗಿದ್ದರು.

ಗುಜರಾತ್‌ ಚುನಾವಣೆಯಲ್ಲಿ ತಮ್ಮನ್ನು ಪಕ್ಷದ ನಾಯಕ ಎಂದು ಘೋಷಿಸಿಲ್ಲ ಎಂಬ ಬಗ್ಗೆ ಅತೃಪ್ತಿ ಹೊಂದಿರುವ ಶಂಕರ್‌ ಸಿನ್ಹಾ ವಘೇಲಾ ಅವರು ಹಾಜರಿದ್ದರು.

ಸಬರಮತಿಯಿಂದ ಪ್ರಚಾರ: ಮೀರಾ ಅವರು ಸಬರಮತಿಯಿಂದ ಪ್ರಚಾರ ಆರಂಭಿಸಲಿದ್ದಾರೆ. ನಂತರ ಅವರು ಬೆಂಗಳೂರಿಗೆ ಭೇಟಿ ಕೊಡಲಿದ್ದಾರೆ.

‘ಸತ್ಯ ಮತ್ತು ಅಹಿಂಸೆಯ ಮೂಲಕ ದೊಡ್ಡ ಸಾಮ್ರಾಜ್ಯವನ್ನೇ ನಡುಗಿಸಿದ ಗಾಂಧಿಯ ಆಶ್ರಮದಿಂದ ಪ್ರಚಾರ ಆರಂಭಿಸುತ್ತೇನೆ. ಗಾಂಧಿ ಸಿದ್ಧಾಂತದಿಂದ ಚೈತನ್ಯ ಪಡೆದುಕೊಳ್ಳಲು ಬಯಸಿದ್ದೇನೆ’ ಎಂದು ಮೀರಾ ತಿಳಿಸಿದರು.

ಕೋವಿಂದ್‌ ಪರ ನಾಲ್ಕನೇ ಪ್ರತಿ ನಾಮಪತ್ರ: ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರ ಪರವಾಗಿ ನಾಲ್ಕನೇ ಪ್ರತಿ ನಾಮಪತ್ರ ಸಲ್ಲಿಸಿದ್ದಾರೆ.

ನಾಯ್ಡು ಅವರು ಸೂಚಕರಾಗಿದ್ದರೆ, ವೈಎಸ್‌ಆರ್‌ ಕಾಂಗ್ರೆಸ್‌ ಮುಖಂಡ ಮೆಕಪತಿ ರಾಜಮೋಹನ್‌ ರೆಡ್ಡಿ ಅನುಮೋದಕರು. ಕೇಂದ್ರ ಸಚಿವ ಅನಂತಕುಮಾರ್‌ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿದ್ದರು. ಕೋವಿಂದ್‌ ಅವರು 23ರಂದು ಮೂರು ಪ್ರತಿ ನಾಮಪತ್ರಗಳನ್ನು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.