ADVERTISEMENT

'ರಾಷ್ಟ್ರೀಯ ಏಕತಾ ದಿನ' ಘೋಷಣೆ

ವಲ್ಲಭ ಭಾಯಿ ಪಟೇಲ್ ಜಯಂತಿ; ಇಂಧಿರಾ ಗಾಂಧಿ ಪುಣ್ಯ ತಿಥಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 14:38 IST
Last Updated 31 ಅಕ್ಟೋಬರ್ 2014, 14:38 IST

ನವದೆಹಲಿ(ಐಎಎನ್ ಎಸ್): ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 139ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ‘ಏಕತೆಗಾಗಿ ಓಟ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಲ್ಲಭ ಭಾಯಿ ಪಟೇಲ್ ಅವರ ಜಯಂತಿಯನ್ನು ಇನ್ನು ಮುಂದೆ ಪ್ರತಿ ವರ್ಷ ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸಲಾಗುವುದು ಎಂದು ಘೋಷಿಸಿದರು.

ಇನ್ನೊಂದೆಡೆ ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ 30ನೇ ಪುಣ್ಯ ತಿಥಿ ಅಂಗವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಲ್ಲಿನ ಯುಮುನಾ ನದಿ ತೀರದಲ್ಲಿನ ಇಂಧಿರಾ ಗಾಂಧಿ ಅವರ ಸ್ಮಾರಕವಿರುವ ‘ಶಕ್ತಿ ಸ್ಥಳ’ಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದರು.

ಮಹಾತ್ಮ ಗಾಂಧೀಜಿ ಅವರಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸರ್ಧಾರ್ ವಲ್ಲಭ ಭಾಯಿ ಪಟೇಲ್ ಅವರು ಕೂಡ ಮಹತ್ವದ ಪಾತ್ರ ವಹಿಸಿದ್ದರು. ಇವರಿಬ್ಬರೂ ಜತೆಯಾಗಿ ಶ್ರಮಿಸಿದ್ದರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಪಟೇಲ್ ಅವರು ಜತೆಯಾಗದಿದ್ದರೆ  ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟ ಅಪೂರ್ಣವಾಗುತ್ತಿತ್ತು. ಹೋರಾಟಕ್ಕೆ ಪಟೇಲ್ ಏಕತೆಯ ಬಲ ತುಂಬಿದರು. ಹೀಗಾಗಿ, ಪಟೇಲ್ ಅವರ ಜಯಂತಿಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುವುದು ಸೂಕ್ತ ಎಂದು ಮೋದಿ ಅಭಿಪ್ರಾಯಪಟ್ಟರು.

ವಿರೋಧ: ಆದರೆ, ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಇಂಧಿರಾ ಗಾಂಧಿ ಅವರ ಪುಣ್ಯ ತಿಥಿ ಅಂಗವಾಗಿ ಆಚರಿಸಿಕೊಂಡು ಬರುತ್ತಿರುವ 'ರಾಷ್ಟ್ರೀಯ ಸದ್ಭಾವನಾ ದಿನ'ವನ್ನು ‘ರಾಷ್ಟ್ರೀಯ ಏಕತಾ ದಿನ’ವನ್ನಾಗಿ ಬಿಜೆಪಿ ಆಚರಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.