ADVERTISEMENT

ರೂ.52,000 ಕೋಟಿ ನಷ್ಟದ ಒಪ್ಪಂದಕ್ಕೆ ಮೊಯಿಲಿ ಉತ್ಸುಕ

ಆಮ್‌ ಆದ್ಮಿ ಪಕ್ಷ ಗಂಭೀರ ಆಪಾದನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಅವರು ಎಸ್ಸಾರ್‌ ಗ್ರೂಪ್‌ ಕಂಪೆನಿಗೆ ತೀರಾ ಅಗ್ಗದ ಬೆಲೆಯಲ್ಲಿ ತೈಲ ನಿಕ್ಷೇಪ ಗುತ್ತಿಗೆ ನೀಡುವ ಯತ್ನದಲ್ಲಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷವು ಗಂಭೀರ ಆಪಾದನೆ ಮಾಡುವ ಮೂಲಕ ಯುಪಿಎ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಿದೆ.

ಇದೇನಾದರೂ ಕಾರ್ಯಗತವಾದಲ್ಲಿ ಸರ್ಕಾರದ ಬೊಕ್ಕಸಕ್ಕೆ 52,000 ಕೋಟಿ ರೂ. ನಷ್ಟವಾ­ಗುತ್ತದೆ ಎಂದು ಪಕ್ಷದ ನಾಯಕ ಪ್ರಶಾಂತ್‌ ಭೂಷಣ್‌ ಹೇಳಿದರು.

‘ಬಾಂಬೆ ಹೈ ಪ್ರದೇಶದಿಂದ 130 ಕಿ.ಮೀ. ದೂರದ ರತ್ನ ಆಯಿಲ್‌ ಫೀಲ್‌್ಡನಲ್ಲಿರುವ ಈ ಮಧ್ಯಮ ಗಾತ್ರದ ನಿಕ್ಷೇಪ­ವನ್ನು 1993ರಲ್ಲಿ ನಿಗದಿ ಮಾಡಲಾದ ಬೆಲೆ­ಯಲ್ಲಿ ಎಸ್ಸಾರ್‌ ಗ್ರೂಪ್‌ಗೆ ನೀಡಬಹುದೆಂದು ಮೊಯಿಲಿ ಟಿಪ್ಪಣಿ ಹೊರಡಿಸಿದ್ದರು’ ಎಂದು ಭೂಷಣ್‌ ಬುಧವಾರ ತಿಳಿಸಿದರು.

‘1993ರಲ್ಲಿ ಕೇಂದ್ರ ಸರ್ಕಾರವು ರತ್ನ ತೈಲ ಪ್ರದೇಶವನ್ನು ಎಸ್ಸಾರ್‌ ಗ್ರೂಪ್‌ಗೆ ನೀಡಲು ನಿರ್ಧ­ರಿಸಿತ್ತು. ಈ ಸಂಬಂಧ 1996ರಲ್ಲಿ ಕಂಪೆನಿಗೆ ಪತ್ರ­ವನ್ನೂ ನೀಡಲಾಗಿತ್ತು. ಆದರೆ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ’ ಎಂದು ವಿವರಿಸಿದರು.

‘ಮೊಯಿಲಿ ಅವರು ತಮ್ಮ ಅಧಿಕಾರಾವಧಿಯ ಕಡೆಯ ದಿನಗಳಲ್ಲಿ ಈ ಸಂಬಂಧ ಸಂಪುಟ ಟಿಪ್ಪಣಿ ನೀಡುವಂತೆ ಸೂಚಿಸಿದ್ದಾರೆ. ಜತೆಗೆ, ಈ ತೈಲ ಪ್ರದೇಶದ ಗುತ್ತಿಗೆಯನ್ನು ಎಸ್ಸಾರ್‌ ಗ್ರೂಪ್‌ಗೆ ನೀಡು­ವಂತೆ ತಾಕೀತು ಮಾಡಿದ್ದಾರೆ’ ಎಂದು ಭೂಷಣ್‌ ಹೇಳಿದರು.

‘ಹೀಗೆ ಮಾಡಿದ್ದೇ ಆದರೆ ಸರ್ಕಾರದ ಆದಾಯಕ್ಕೆ ಭಾರಿ ನಷ್ಟವಾಗುತ್ತದೆ’ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ಎಚ್ಚರಿಕೆ ನೀಡಿದರೂ ಮೊಯಿಲಿ ಈ ವಿಷಯದಲ್ಲಿ ತಮ್ಮದೇ ನಿಲುವಿನೊಂದಿಗೆ ಮುಂದುವರಿದಿದ್ದರು ಎಂದರು.

ಇದೇ ವೇಳೆ ಎಸ್ಸಾರ್‌ ಕಂಪೆನಿಯ ವಕ್ತಾರರು ಸ್ಪಷ್ಟನೆ ನೀಡಿ, ‘ಕಂಪೆನಿಯು ರತ್ನ ತೈಲ ಪ್ರದೇಶ ಗುತ್ತಿಗೆಯನ್ನು ಮುಕ್ತ ಹರಾಜು ಪ್ರಕ್ರಿಯೆಯಲ್ಲಿ ತನ್ನದಾಗಿಸಿಕೊಂಡಿದೆ. ತೈಲ ಆಮದು ಕಡಿತಗೊಳಿಸುವ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಈ ನಿಕ್ಷೇಪ ಪ್ರದೇಶವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.