ADVERTISEMENT

ರೈತರ ಸಾಲಮನ್ನಾ ಮಾಡುವುದು ಫ್ಯಾಷನ್‌ ಆಗಿದೆ: ವೆಂಕಯ್ಯನಾಯ್ಡು

ಪಿಟಿಐ
Published 22 ಜೂನ್ 2017, 17:15 IST
Last Updated 22 ಜೂನ್ 2017, 17:15 IST
ವೆಂಕಯ್ಯನಾಯ್ಡು
ವೆಂಕಯ್ಯನಾಯ್ಡು   

ಮುಂಬೈ: ಕೃಷಿ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆ ಇತ್ತೀಚಿನ ದಿನಗಳಲ್ಲಿ ರೂಢಿ­ಯಾಗಿಬಿಟ್ಟಿದೆ. ಸಾಲವನ್ನು ಮನ್ನಾ ಮಾಡುವುದೇ ಸಮಸ್ಯೆಗೆ ಪರಿಹಾರವಲ್ಲ, ಬದಲಿಗೆ ತೀರಾ ಸಂಕಷ್ಟ ಸ್ಥಿತಿಯಲ್ಲಿ ಮಾತ್ರ ಈ ಕ್ರಮಕ್ಕೆ ಮುಂದಾಗಬೇಕು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದರು.
ಆದರೆ ಈ ಹೇಳಿಕೆಗೆ ವಿವಿಧ ರಾಜಕೀಯ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾದ ಬಳಿಕ ಅವರ ಸ್ಪಷ್ಟೀಕರಣ ನೀಡಿದ್ದಾರೆ.

ಸಾಲ ಮನ್ನಾ ಮಾಡಲು ರಾಜಕೀಯ ಪಕ್ಷಗಳು ಪೈಪೋಟಿಯಲ್ಲಿ ಒತ್ತಾಯಿ ಸುವುದು ರೂಢಿಯಾಗಿದೆ ಎಂಬುದು ತಮ್ಮ ಹೇಳಿಕೆಯ ಅರ್ಥ ಎಂದು ಸಮಜಾಯಿಸಿ ನೀಡಿದ್ದಾರೆ.

ರೈತರ ಸ್ಥಿತಿ ಸುಧಾರಣೆಗೆ ಅಗತ್ಯವಾದ ದೀರ್ಘಾವಧಿ ಯೋಜನೆಗಳ ಬಗ್ಗೆ ರಾಜಕೀಯ ಪಕ್ಷಗಳು ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ.

ADVERTISEMENT

ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ, ರಾಜಸ್ತಾನ, ಪಂಜಾಬ್, ಉತ್ತರ ಪ್ರದೇಶ ಮತ್ತು ಒಡಿಶಾದಲ್ಲಿ ಸಾಲ ಮನ್ನಾಕ್ಕಾಗಿ ರೈತರು ಪ್ರತಿಭಟನೆ ನಡೆಸಿದ್ದನ್ನು ಅವರು ಪ್ರಸ್ತಾಪಿಸಿದರು.

ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು ಮತ್ತು ಅವರು ಸಂಕಷ್ಟದಲ್ಲಿ ಇದ್ದಾಗ ಸೂಕ್ತ ನೆರವು ದೊರಕಬೇಕು ಎಂದು ನಾಯ್ಡು ಅಭಿಪ್ರಾಯಪಟ್ಟರು.
ರೈತರಿಗೆ ಅಗತ್ಯವಾದ ಗೋದಾಮು ವ್ಯವಸ್ಥೆ, ಶೈತ್ಯಾಗಾರ, ಶೈತ್ಯಾಗಾರ ವ್ಯವಸ್ಥೆಯ ವ್ಯಾನ್ ಇವೇ ಮೊದಲಾದ ಮೂಲ ಸೌಕರ್ಯವನ್ನು  ಒದಗಿಸಬೇಕು ಎಂದರು.

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಬೇಕು ಎಂದು ತಿಳಿಸಿದರು.

ನಾಯ್ಡು ಅವರ  ಹೇಳಿಕೆಯ ಬಗ್ಗೆ ಎಎಪಿ ಮತ್ತು ಸಿಪಿಎಂಗಳು ಟೀಕೆ ಮಾಡಿವೆ.

ಕೇಂದ್ರ ಸರ್ಕಾರವು ಶ್ರೀಮಂತರ ಪರ ಎಂಬುದನ್ನು ನಾಯ್ಡು ಹೇಳಿಕೆ ಸಾಬೀತುಪಡಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ರೈತರ ಆತ್ಮಹತ್ಯೆಯನ್ನೂ ‘ರೂಢಿ’ ಎಂದು ಕೇಂದ್ರ ಸರ್ಕಾರ ಕರೆಯುತ್ತದೆಯೇ ಎಂದು ಸಿಪಿಎಂ ಮುಖ್ಯಸ್ಥ ಸೀತಾರಾಂ ಯೆಚೂರಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.