ADVERTISEMENT

ಲೂಟಿಕೋರರಿಗೆ ದುರ್ದಿನ: ಮೋದಿ

ಮಥುರಾದಲ್ಲಿ ಎನ್‌ಡಿಎ ಸರ್ಕಾರದ ಮೊದಲ ವರ್ಷದ ಸಾಧನೆ ಬಿಚ್ಚಿಟ್ಟ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 25 ಮೇ 2015, 19:30 IST
Last Updated 25 ಮೇ 2015, 19:30 IST

ನಾಗ್ಲಾಚಂದ್ರಭಾನ್‌ (ಮಥುರಾ): ಎನ್‌ಡಿಎ ಸರ್ಕಾರದ ಮೊದಲ ವರ್ಷದ ಸಾಧನೆಯ ಪಟ್ಟಿಯನ್ನು ಅನಾವರಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ ಈ ಒಂದು ವರ್ಷವು ಭ್ರಷ್ಟಾಚಾರದಿಂದ ಮುಕ್ತವಾಗಿದೆ. ಆದರೆ 60 ವರ್ಷಗಳ ಆಡಳಿತದಲ್ಲಿ ದೇಶವನ್ನು ಲೂಟಿ ಮಾಡಿದವರ ಪಾಲಿಗೆ ದುರ್ದಿನಗಳು ಎದುರಾಗಿವೆ’ ಎಂದರು.

ಎನ್‌ಡಿಎ ಸರ್ಕಾರದ ವರ್ಷಾಚರಣೆ   ಪ್ರಯುಕ್ತ  ದೀನ್‌ದಯಾಳ್‌ ಉಪಾಧ್ಯಾಯ ಅವರ ಜನ್ಮಸ್ಥಳ ನಾಗ್ಲಾಚಂದ್ರಭಾನ್‌ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಅವರು,  ಈಗ ಎಲ್ಲರಿಗೂ ಒಳ್ಳೆಯ ದಿನಗಳು ಬಂದಿವೆ. ಆದರೆ ಕೆಲವರಿಗೆ ಕೆಟ್ಟ ದಿನಗಳು ಶುರುವಾಗಿದೆ. ಇದರಿಂದಾಗಿ ಅವರು ವ್ಯಾಕುಲಗೊಂಡಿದ್ದಾರೆ ಎಂದು ಹೇಳಿದರು.

60 ವರ್ಷಗಳಲ್ಲಿ, ದೆಹಲಿ ರಾಜಕೀಯ ಮೊಗಸಾಲೆಯಲ್ಲಿ ಕೇವಲ ಅವರ ಧ್ವನಿ ಮಾತ್ರ ಕೇಳುತ್ತಿತ್ತು. ತಮಗೆ ತೋಚಿದಂತೆ ಅವರು ದೇಶವನ್ನು ನಡೆಸುತ್ತಿದ್ದರು. ವರ್ಷಗಳ ಕಾಲ ದೇಶವನ್ನು ಕೊಳ್ಳೆಹೊಡೆದವರಿಗೆ ನಾನು ಒಳ್ಳೆಯ ದಿನಗಳ ಭರವಸೆ ಕೊಟ್ಟಿರಲಿಲ್ಲ.  ಅವರಿಗೆ ಇನ್ನು ಮುಂದೆ ಸಂಕಷ್ಟಗಳ ಸರಮಾಲೆಯೇ ಕಾದಿದೆ ಎಂದು ಮೋದಿ ಎಚ್ಚರಿಕೆ ನೀಡಿದರು.

ಮಹಾತ್ಮ ಗಾಂಧಿ, ಲೋಹಿಯಾ ಹಾಗೂ ದೀನ್‌ದಯಾಳ್‌ ಅವರ ಚಿಂತನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸಿವೆ. ಆದ ಕಾರಣ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಹಂಚಿಕೊಳ್ಳುವುದಕ್ಕೆ ದೀನ್‌ದಯಾಳ್‌ ಧಾಮ ಆಯ್ಕೆಮಾಡಿಕೊಳ್ಳಲಾಯಿತು ಎಂದರು.
ಈ ಮೊದಲು ಸರ್ಕಾರವನ್ನು ರಿಮೋಟ್‌ ಕಂಟ್ರೋಲ್‌ ಮೂಲಕ ನಡೆಸಲಾಗುತ್ತಿತ್ತು. ನಿತ್ಯವೂ ಹಗರಣ ಅಥವಾ ಭ್ರಷ್ಟಾಚಾರ ಬಯಲಾಗುತ್ತಿತ್ತು ಎಂದ ಮೋದಿ, ‘ಈ ಒಂದು ವರ್ಷದಲ್ಲಿ  ನೀವು ಹಗರಣ, ಸ್ವಜನಪಕ್ಷಪಾತ ಹಾಗೂ ರಿಮೋಟ್‌ ಕಂಟ್ರೋಲ್‌ ಬಗ್ಗೆ ಕೇಳಿದ್ದು ಉಂಟೇ’ಎಂದು ಜನಸಮೂಹವನ್ನು ಪ್ರಶ್ನಿಸಿದರು. ಕಾಂಗ್ರೆಸ್‌ ಪಕ್ಷದ ಹೆಸರನ್ನು ಪ್ರಸ್ತಾಪಿಸದೆಯೇ  ಅದರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ‘ದೇಶದ ಖಜಾನೆಯನ್ನು ಮುಟ್ಟುವುದಕ್ಕೆ ಯಾವುದೇ  ‘ಕೈ’ಗೆ ಅವಕಾಶ ಕೊಡುವುದಿಲ್ಲ ಎಂದು ಲೋಕಸಭೆ ಚುನಾವಣೆ ವೇಳೆ ಆಶ್ವಾಸನೆ ನೀಡಿದ್ದೆ’ ಎಂದರು.

‘ಅಭಿಮನ್ಯು ಎಂಟು ಸುತ್ತಿನ ಚಕ್ರವ್ಯೂಹ್ಯವನ್ನು ಭೇದಿಸಬೇಕಾಗಿತ್ತು. ಆದರೆ ದೆಹಲಿಯಲ್ಲಿ ನೂರಾರು ಸುತ್ತಿನ,  ಅಧಿಕಾರದ ಚಕ್ರವ್ಯೂಹಗಳು ಇವೆ.  ನಿಮ್ಮ ಆಶೀರ್ವಾದದೊಂದಿಗೆ ಇವುಗಳನ್ನು ದಾಟಿ ಬಂದಿದ್ದೇನೆ’ ಎಂದು ಮೋದಿ ಹೇಳಿದರು.ಎನ್‌ಡಿಎ ಸರ್ಕಾರವು ಸ್ವಜನಪಕ್ಷಪಾತ ಹಾಗೂ ದಲ್ಲಾಳಿ ಸಂಸ್ಕೃತಿಗೆ ಅಂತ್ಯ ಹಾಡಿದೆ. ಲೂಟಿ ಹಾಗೂ ಕಾಳಸಂತೆಗೆ ಲಗಾಮು ಹಾಕಿದೆ ಎಂದೂ
ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.