ADVERTISEMENT

ವಡೋದರಾದಲ್ಲೂ ಪ್ರವಾಹದಂಥ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2014, 10:02 IST
Last Updated 11 ಸೆಪ್ಟೆಂಬರ್ 2014, 10:02 IST

ವಡೋದರಾ (ಪಿಟಿಐ): ಸತತ ಮಳೆಯ ಪರಿಣಾಮ ವಿಶ್ವಾಮಿತ್ರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ವಡೋದರಾದಲ್ಲಿರುವ  ಎರಡು ಲಕ್ಷಕ್ಕೂ ಅಧಿಕ ಜನರು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಜಲಾವೃತಗೊಂಡಿರುವ ವಸತಿ ಪ್ರದೇಶಗಳಲ್ಲಿ ಸಿಲುಕಿರುವ ಜನತೆಗೆ ಆಹಾರದ ಪೊಟ್ಟಣಗಳನ್ನು ಪೂರೈಸಲು ನಗರಾಡಳಿತವು ಸೇನೆಯ ನೆರವು ಕೋರಿದೆ.

‘ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಅಲ್ಲಿ ಸಿಲುಕಿರುವ ಜನತೆಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕಷ್ಟವಾಗುತ್ತಿದೆ. ಆದ್ದರಿಂದ ಅಂತಹ ಪ್ರದೇಶಗಳಲ್ಲಿ ಹೆಲಿಕಾಪ್ಟರ್‌ಗಳ ಮೂಲಕ ಆಹಾರದ ಪೊಟ್ಟಣಗಳು ಹಾಗೂ ಕುಡಿಯುವ ನೀರಿನ ಬಾಟಲಿಗಳನ್ನು ಒದಗಿಸಲು ನೆರವು ನೀಡುವಂತೆ ಸೇನೆಗೆ ಮನವಿ ಮಾಡಿಕೊಂಡಿದ್ದೇವೆ’ ಎಂದು ವಡೋದರಾ  ನಗರಪಾಲಿಕೆ ಆಯುಕ್ತ  ಮನಿಷ್‌ ಭಾರದ್ವಾಜ್‌ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ನದಿಯ ನೀರಿನಿಂದಾಗಿ ನಗರದ ಪಶ್ಚಿಮ ಭಾಗದ ಜನವಸತಿ ಪ್ರದೇಶಗಳು ಜಲಾವೃತ ಗೊಂಡಿರುವುದರಿಂದ 2 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ ಎಂದು ನಗರಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್‌ ತಿಳಿಸಿದ್ದಾರೆ.

ADVERTISEMENT

‘ಜಲಾವೃತಗೊಂಡಿರುವ ಪನಿಗೇಟ್‌, ಕರ್ಲಿಬಾಗ್‌, ಮಾಂಡ್ವಿಮ ಸಯಾಜಿಗಂಜ್‌ ಹಾಗೂ ಮುಂಜಮ್‌ಹುದಾ ಜನವಸತಿ ಪ್ರದೇಶಗಳಲ್ಲಿರುವ ಜನರು ಸಂಕಷ್ಟಕ್ಕೀಡಾಗಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ಜಲಾವೃತಗೊಂಡ ಪ್ರದೇಶಗಳಿಂದ ಸುಮಾರು 1500 ಜನರನ್ನು ಮಂಗಳವಾರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಿರುವ ಸ್ಥಳೀಯ ಆಡಳಿತ, ಬುಧವಾರ ಮತ್ತೆ 200ಕ್ಕೂ ಅಧಿಕ ಜನರನ್ನು ರಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.