ADVERTISEMENT

ವರ್ಷಾಂತ್ಯಕ್ಕೆ ಎಲ್ಲರಿಗೂ ಆರೋಗ್ಯ ವಿಮೆ ಖಾತ್ರಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2014, 19:30 IST
Last Updated 5 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಎಲ್ಲರಿಗೂ ಆರೋಗ್ಯ ವಿಮೆ ಒದಗಿ­ಸುವ  ‘ಸಾರ್ವತ್ರಿಕ ಆರೋಗ್ಯ ಖಾತರಿ ಯೋಜನೆ’­ಯನ್ನು ಈ ವರ್ಷಾಂತ್ಯ­ದೊಳಗೆ ಅನುಷ್ಠಾನಕ್ಕೆ ತರುವ ವಿಶ್ವಾಸ­ವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ. ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ­ಯನ್ನು ಆರೋಗ್ಯ ಸಚಿವಾಲಯವು ಸಿದ್ಧಪಡಿಸಿದೆ.

‘ನಾವು ಯೋಜನೆಯನ್ನು ಸಿದ್ಧಪಡಿ­ಸಿದ್ದೇವೆ. ಈ ಸಂಬಂಧ ರಾಜ್ಯ ಸರ್ಕಾರ­ಗಳೊಂದಿಗೆ ಚರ್ಚೆ ನಡೆ­ಯುತ್ತಿದೆ. ಯೋಜನೆಯ ಮೊದಲ ಹಂತ ಶೀಘ್ರವೇ ಅನುಷ್ಠಾನಕ್ಕೆ ಬರುವ ಸಾಧ್ಯತೆಯಿದೆ’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಸಾರ್ವತ್ರಿಕ ಆರೋಗ್ಯ ವಿಮೆಗೆ ಸಂಬಂಧಿ­­ಸಿದ ಜಗತ್ತಿನ ಅತ್ಯಂತ ದೊಡ್ಡ ಯೋಜನೆ ಇದಾಗಿದೆ ಎಂದು ಹೇಳಿ­ಕೊಂಡಿರುವ ಸಚಿವಾಲಯವು, ಯೋಜನೆಯಡಿ ಬಡ­ವರು ಉಚಿತವಾಗಿ ಚಿಕಿತ್ಸೆ ಪಡೆಯಲಿದ್ದಾರೆ ಎಂದಿದೆ.

ಯೋಜನೆಯ ಸದಸ್ಯರಿಗೆ ದೇಶದಾ­ದ್ಯಂತ ಸರ್ಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ರೋಗ ತಪಾಸಣೆ ಒಳಗೊಂಡು 50 ಬಗೆಯ ಅಗತ್ಯ ಔಷಧಿಗಳು ಮತ್ತು 30 ಬಗೆಯ ಆಯುಷ್‌ ಔಷಧಿಗಳು ಲಭ್ಯವಾಗುವಂತೆ ಮಾಡಲಾಗುವುದು. ಹಾಗೆಯೇ ಆರೋಗ್ಯ  ರಕ್ಷಣಾ ಮಾಹಿತಿ ನೀಡಲಾ­ಗು­ವುದು ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

ಬಿಜೆಪಿ ಪ್ರಣಾಳಿಕೆ: ಸಾರ್ವತ್ರಿಕ ಆರೋಗ್ಯ ವಿಮೆ ಯೋಜನೆ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶವಾಗಿತ್ತು. ಇದನ್ನು ಯಶಸ್ವಿಯಾಗಿ ಜಾರಿಗೆ ತರಲು ಬೇಕಾದ ಕಾರ್ಯಸೂಚಿಯನ್ನು ಸಿದ್ಧಪಡಿಸಲು  ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ತಜ್ಞರ ಸಮಿತಿಯನ್ನೂ ರಚಿಸಿದ್ದಾರೆ. ಸಮಿತಿಯ ಮುಖ್ಯಸ್ಥ ಚಂಡೀಗಡದ ಸ್ನಾತಕೋತ್ತರ ವೈದ್ಯ­ಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ರಂಜಿತ್‌ ರಾಯ್‌ ಚೌಧರಿ ಅವರು ಈಗಾಗಲೇ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ.

ಹೊಸ ಸಂಚಲನ ನಿರೀಕ್ಷೆ: ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ವಿಮೆಯು ದೇಶದ ಶೇ 25ರಷ್ಟು ಜನರನ್ನಷ್ಟೇ ತಲುಪುತ್ತಿದೆ. ಹೀಗಾಗಿ ಹೊಸ ಯೋಜನೆಯು ದೇಶದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿದೆ.

ದೇಶದಲ್ಲಿ ಈಗ 1,700 ಮಂದಿಗೆ ಒಬ್ಬರಂತೆ ವೈದ್ಯರು ಲಭ್ಯರಿರುವ ಸಂಗತಿಯನ್ನು ಇತ್ತೀಚೆಗೆಷ್ಟೇ ಪ್ರಸ್ತಾಪಿಸಿದ್ದ ಹರ್ಷವರ್ಧನ್‌, ವೈದ್ಯರು ಮತ್ತು  ರೋಗ ಪತ್ತೆ ಹಾಗೂ ಎಕ್ಸ್‌ ರೇಯಂತಹ ವಿಭಾಗಗಳಿಗೆ ಅಗತ್ಯವಿರುವ ತಾಂತ್ರಿಕ ಸಿಬ್ಬಂದಿಯನ್ನು ಒದಗಿಸುವುದೇ ದೊಡ್ಡ ಸವಾಲು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.