ADVERTISEMENT

ವಾಜಪೇಯಿ ‘ಕನಸು’ ಈಡೇರಿಸುವೆ: ಮೋದಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2014, 12:59 IST
Last Updated 22 ನವೆಂಬರ್ 2014, 12:59 IST

ಕಿಶ್ತವಾರ್‌, ಜಮ್ಮು ಮತ್ತು ಕಾಶ್ಮೀರ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಜನತೆಯ ಹೃದಯದಲ್ಲಿ ನೆಲೆಯೂರಿರುವ ‘ಪ್ರಜಾಪ್ರಭುತ್ವ, ಮಾನವೀಯತೆ ಹಾಗೂ ಕಾಶ್ಮೀರಿಯತೆ’ ಆಧಾರದಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ‘ಕನಸು’ ಸಾಕಾರಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭರವಸೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಚುನಾವಣೆ ಅಂಗವಾಗಿ ಮೊದಲ ಚುನಾವಣಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಪ್ರಜಾಪ್ರಭುತ್ವ, ಮಾನವೀಯತೆ ಹಾಗೂ ಕಾಶ್ಮೀರಿಯತೆ- ಅಟಲ್‌ಜೀ ಅವರ ಈ ಪದಗಳು ಕಾಶ್ಮೀರಿಗರ ಹೃದಯಗಳಲ್ಲಿ ಸ್ಥಾನ ಗಳಿಸಿವೆ. ಅವು ಕಾಶ್ಮೀರಿ ಯುವಕರಲ್ಲಿ ಉತ್ತಮ ಭವಿಷ್ಯದ ಬಗ್ಗೆ ಭರವಸೆಯನ್ನು ಒಡಮೂಡಿಸಿವೆ’ ಎಂದು ನುಡಿದರು.

ಅಲ್ಲದೇ, ‘ಜಮ್ಮು ಮತ್ತು ಕಾಶ್ಮೀರದಲ್ಲಿ  ಬಹುಮತದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡುತ್ತೇನೆ. ಜಮ್ಮು ಮತ್ತು ಕಾಶ್ಮೀರಕ್ಕಾಗಿ ಅಟಲ್‌ಜೀ ಅವರು ಕಂಡಿದ್ದ ಕನಸು ಸಾಕಾರಗೊಳಿಸುತ್ತೇನೆ. ನನ್ನ ಮಾತಿನ ಮೇಲೆ ನಂಬಿಕೆಯಿಡಿ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ರಾಜಕೀಯಕ್ಕೆ ಜಾತಿಯ ಬಣ್ಣ ಬಳಿಯುತ್ತಿರುವ ಪ್ರಯತ್ನಗಳ ವಿರುದ್ಧ ಹರಿಹಾಯ್ದಿರುವ ಅವರು, ‘ಕಾಶ್ಮೀರಿಗಳು ಕಾಶ್ಮೀರಿಗಳೇ’. ಕೇಂದ್ರದಲ್ಲಿರುವ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿದೆ ಎಂದಿದ್ದಾರೆ.

‘ನಮ್ಮದು ಒಂದೇ ಮಂತ್ರ -ಅಭಿವೃದ್ಧಿ, ಅಭಿವೃದ್ಧಿ ಮತ್ತು ಅಭಿವೃದ್ಧಿ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.