ADVERTISEMENT

ವಿಡಿಯೊದಲ್ಲಿ ಲತಾ, ಸಚಿನ್‌ಗೆ ಅವಮಾನ

ಹಾಸ್ಯ ಕಲಾವಿದ ತನ್ಮಯ್‌ ಭಟ್‌ ವಿರುದ್ಧ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 31 ಮೇ 2016, 0:29 IST
Last Updated 31 ಮೇ 2016, 0:29 IST
ವಿಡಿಯೊದಲ್ಲಿನ ಚಿತ್ರ 		-	ತನ್ಮಯ್‌ ಭಟ್‌
ವಿಡಿಯೊದಲ್ಲಿನ ಚಿತ್ರ - ತನ್ಮಯ್‌ ಭಟ್‌   

ಮುಂಬೈ (ಪಿಟಿಐ): ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ ಮತ್ತು ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರನ್ನು ವಿಡಿಯೊದಲ್ಲಿ ಅಪಹಾಸ್ಯ ಮಾಡಿರುವ  ಹಾಸ್ಯ ಕಲಾವಿದ ತನ್ಮಯ್‌ ಭಟ್‌ ವಿರುದ್ಧ  ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆನ್‌ಲೈನ್‌ ಹಾಸ್ಯಗಾರರ ಗುಂಪು ಎಐಬಿ ಮತ್ತು ಅದರ ಮುಖ್ಯಸ್ಥ ತನ್ಮಯ್‌ ವಿರುದ್ಧ ರಾಜ್‌ ಠಾಕ್ರೆ ಅವರ ಮಹಾರಾಷ್ಟ್ರ ನವ ನಿರ್ಮಾಣ ಸೇನಾ (ಎಂಎನ್‌ಎಸ್‌)  ದೂರು ದಾಖಲಿಸಿತ್ತು.  ಈ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವಿವಾದಾತ್ಮಕ ವಿಡಿಯೊದಲ್ಲಿ ಏನಿದೆ? ತನ್ಮಯ್‌ ಅವರು ಸಚಿನ್‌ ಮತ್ತು ಲತಾ ಅವರ ಧಾಟಿ ಅನುಕರಿಸಿ ಇಬ್ಬರನ್ನೂ ಅಪಹಾಸ್ಯ ಮಾಡಿರುವುದು ವಿಡಿಯೊದಲ್ಲಿದೆ.

‘ವಿರಾಟ್‌  ಕೊಹ್ಲಿ ಅವರು ನಿನಗಿಂತ 10 ಪಟ್ಟು ಉತ್ತಮ ಬ್ಯಾಟ್ಸ್‌ಮನ್‌’ ಎನ್ನುವ ಮೂಲಕ ಬ್ಯಾಟಿಂಗ್‌ ಚಾಂಪಿಯನ್‌ಗೆ ಅವಹೇಳನ ಮಾಡಿದ್ದಾರೆ.
ಆ ಬಳಿಕ ಲತಾ ಮತ್ತು ಸಚಿನ್‌ ನಡುವೆ ಮಾತಿನ ಚಕಮಕಿ ನಡೆಯುವ ರೀತಿಯಲ್ಲಿ ತನ್ಮಯ್‌ ಮಾತನಾಡಿದ್ದಾರೆ.

‘ವಿರಾಟ್‌ ನಿನಗಿಂತಲೂ ಉತ್ತಮ ಬ್ಯಾಟ್ಸ್‌ಮನ್‌. ಆತನನ್ನು ನಾನು ಇಷ್ಟಪಡುವೆ’ ಎಂದು ಲತಾ ಅವರ ಧಾಟಿಯಲ್ಲಿ ತನ್ಮಯ್‌ ಹೇಳಿದ್ದಾರೆ.

‘ನಿನ್ನನ್ನೊಮ್ಮೆ ನೋಡಿಕೋ. ಜಾನ್‌ ಸ್ನೋ ಕೂಡಾ ಸತ್ತ. ಹಾಗಾಗಿ ನೀನೂ ಸಾಯಬೇಕು’ ಎಂದು ಸಚಿನ್‌ ಅವರು ಹಿರಿಯ ಗಾಯಕಿಗೆ ವ್ಯಂಗ್ಯ ಮಾಡುವುದು ವಿಡಿಯೊದಲ್ಲಿದೆ.

‘ನಿನ್ನನ್ನು ನೋಡುವಾಗ 5 ಸಾವಿರ ವರ್ಷ ವಯಸ್ಸಾದಂತೆ ಕಾಣುತ್ತದೆ. ನಿನ್ನ ಮುಖವನ್ನೊಮ್ಮೆ ನೋಡು. ಯಾರೋ ನಿನ್ನನ್ನು ಎಂಟು ದಿನ ನೀರಿನಲ್ಲಿ ನೆನೆಸಿಟ್ಟ ಹಾಗಿದೆ’ ಎಂದೂ ವ್ಯಂಗ್ಯ ಮಾಡಿದ್ದಾರೆ.

ಕ್ರಮಕ್ಕೆ ಬಿಜೆಪಿ, ಶಿವಸೇನಾ ಆಗ್ರಹ: ಕೀಳು ಅಭಿರುಚಿಯ ವಿಡಿಯೊ ಮಾಡಿರುವ ಎಐಬಿ ಹಾಗೂ ತನ್ಮಯ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಹಾಗೂ ಶಿವಸೇನಾ ಸೋಮವಾರ ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿವೆ.

‘ಕೆಲವು ಬುದ್ಧಿಗೆಟ್ಟವರು ಈ ವಿಡಿಯೊ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶಿವಸೇನಾ ನಾಯಕಿ ನೀಲಮ್‌ ಗೋರೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘ಕೆಲವು ವ್ಯಕ್ತಿಗಳು ಲತಾ ಮತ್ತು ಸಚಿನ್‌ ಹೊಂದಿರುವ ಜನಪ್ರಿಯತೆ ದುರ್ಬಳಕೆ ಮಾಡಿ ಪ್ರಚಾರ ಗಿಟ್ಟಿಸಲು ಬಯಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಸಚಿನ್‌ ವರ್ಸಸ್‌ ಲತಾ ಸಿವಿಲ್‌ ವಾರ್‌’ ಎಂಬ ಹೆಸರಿನ ವಿವಾದಾತ್ಮಕ ವಿಡಿಯೊವನ್ನು ತನ್ಮಯ್‌ ಅವರು ಯೂಟ್ಯೂಬ್‌ ಮತ್ತು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಅಪ್‌ಲೋಡ್‌ ಮಾಡಿದ್ದರು.

‘ತನ್ಮಯ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಮುಂಬೈ ಪೊಲೀಸ್‌ ಆಯುಕ್ತರಿಗೂ ಪತ್ರ ಬರೆದಿದ್ದೇನೆ’ ಎಂದು ಗೋರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.