ADVERTISEMENT

ವಿಮಾನ ತುರ್ತು ಭೂಸ್ಪರ್ಶ

ಬಾಂಬ್‌ ಬೆದರಿಕೆ: ಆತಂಕದ ಕ್ಷಣ ಎದುರಿಸಿದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ನವದೆಹಲಿ (ಪಿಟಿಐ): ಬ್ಯಾಂಕಾಕ್‌ನಿಂದ ಇಸ್ತಾಂಬುಲ್‌ಗೆ ಹೋಗುತ್ತಿದ್ದ ವಿಮಾನವೊಂದರ ಪ್ರಯಾಣಿಕರು ಬಾಂಬ್‌ ಬೆದರಿಕೆ ಕಾರಣದಿಂದ ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು.

ಟರ್ಕಿಷ್‌ ಏರ್‌ಲೈನ್ಸ್‌ನ ಏರ್‌ಬಸ್‌ 330 ವಿಮಾನವನ್ನು ಮಂಗಳವಾರ ಮಧ್ಯಾಹ್ನ 1.41ರ ಹೊತ್ತಿಗೆ ತುರ್ತಾಗಿ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಬಾಂಬ್‌ ಬೆದರಿಕೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ತುರ್ತು ಸ್ಥಿತಿ ಘೋಷಿಸಲಾಗಿತ್ತು. ವಿಮಾನದಲ್ಲಿ 148 ಪ್ರಯಾಣಿಕರಿದ್ದರು.

ವಿಮಾನದ ಶೌಚಾಲಯವೊಂದರ ಕನ್ನಡಿಯಲ್ಲಿ ‘ವಿಮಾನದ ಸರಕು ವಿಭಾಗದಲ್ಲಿ ಬಾಂಬ್‌ ಇರಿಸಲಾಗಿದೆ’ ಎಂದು ಲಿಪ್‌ಸ್ಟಿಕ್‌ ಬಳಸಿ ಬರೆದಿರುವುದನ್ನು ಪ್ರಯಾಣಿಕರೊಬ್ಬರು ಪೈಲಟ್‌ ಗಮನಕ್ಕೆ ತಂದರು.  ತಕ್ಷಣವೇ ನಾಗಪುರ ವಿಮಾನ ಸಂಚಾರ ನಿಯಂತ್ರಣಾಧಿಕಾರಿಯನ್ನು (ಎಟಿಸಿ) ಪೈಲಟ್‌ ಸಂಪರ್ಕಿಸಿದರು. ದೆಹಲಿ ಎಟಿಸಿಯನ್ನು ಸಂಪರ್ಕಿಸುವಂತೆ ಪೈಲಟ್‌ಗೆ ಸೂಚಿಸಲಾಯಿತು.

ಸೂಚನೆಯಂತೆ ದೆಹಲಿ ವಿಮಾನ ನಿಲ್ದಾಣವನ್ನು ಸಂಪರ್ಕಿಸಿ, ಅಲ್ಲಿ ವಿಮಾನವನ್ನು ಇಳಿಸಲಾಯಿತು. ನಿಲ್ದಾಣದಲ್ಲಿ ಎನ್‌ಎಸ್‌ಜಿ ಕಮಾಂಡೊಗಳು ಮತ್ತು ಬಾಂಬ್‌ ನಿಷ್ಕ್ರಿಯದಳವನ್ನು ನಿಯೋಜಿಸಲಾಗಿತ್ತು.  ವಿಮಾನದೊಳಗೆ ಯಾವುದೇ ಸ್ಫೋಟಕ ಸಾಧನ ಪತ್ತೆಯಾಗಿಲ್ಲ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮಹೇಶ್‌ ಶರ್ಮಾ ತಿಳಿಸಿದ್ದಾರೆ.   ನಂತರ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ.

ಪ್ರಯಾಣಿಕರ ಮಾಹಿತಿಗೆ ಸೂಚನೆ: ವಿಮಾನದಲ್ಲಿದ್ದ ಪ್ರಯಾಣಿಕರ ಮಾಹಿತಿ ಒದಗಿಸುವಂತೆ ಟರ್ಕಿಷ್‌ ಏರ್‌ಲೈನ್ಸ್‌ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಪ್ರಯಾಣಿಕರಲ್ಲೊಬ್ಬರು ಬಾಂಬ್‌ ಬೆದರಿಕೆ ಇದೆ ಎಂದು ಬರೆದು ಕೀಟಲೆ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಮಹೇಶ್‌ ಶರ್ಮಾ ಹೇಳಿದ್ದಾರೆ.

‘ಯಾವುದೇ ರೀತಿಯ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಬೇಕಾದ ವಿಶೇಷ ವ್ಯವಸ್ಥೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇದೆ. ಹಾಗಾಗಿಯೇ ನಾಗಪುರದ ಬದಲಿಗೆ ದೆಹಲಿಯಲ್ಲಿ ವಿಮಾನ ಇಳಿಸಲು ಸೂಚಿಸಲಾಗಿದೆ. ವಿಮಾನ ಇಳಿಯುವುದಕ್ಕೆ ಮೊದಲೇ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು’ ಎಂದು ಶರ್ಮಾ ತಿಳಿಸಿದ್ದಾರೆ.

ವಿಮಾನದೊಳಗಿನಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊರಗೆ ಕರೆತಂದು ಸುರಕ್ಷಿತ ಸ್ಥಳಕ್ಕೆ ತಲುಪಿಸುವುದು ನಮ್ಮ ಆದ್ಯತೆಯಾಗಿತ್ತು. ನಂತರ ವಿಮಾನವನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಗಿದೆ. ಶ್ವಾನದಳವನ್ನೂ ಇದಕ್ಕೆ ಬಳಸಿಕೊಳ್ಳಲಾಗಿದೆ. ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.