ADVERTISEMENT

ಮ್ಯಾಜಿಸ್ಟ್ರಿಯಲ್ ತನಿಖೆ

ಜೆಎನ್‌ಯು ವಿವಾದಕ್ಕೆ ರಾಜಕೀಯ ತಿರುವು, ಪ್ರತಿಪಕ್ಷ ಬೆಂಬಲ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 20:14 IST
Last Updated 13 ಫೆಬ್ರುವರಿ 2016, 20:14 IST
ಕನಯ್ಯಾಗೆ ಬೆಂಬಲ ನೀಡಲು ಜೆಎನ್‌ಯು ಆವರಣಕ್ಕೆ ಬಂದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ -ಎಎಫ್ ಪಿ ಚಿತ್ರ
ಕನಯ್ಯಾಗೆ ಬೆಂಬಲ ನೀಡಲು ಜೆಎನ್‌ಯು ಆವರಣಕ್ಕೆ ಬಂದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ -ಎಎಫ್ ಪಿ ಚಿತ್ರ   

ನವದೆಹಲಿ (ಪಿಟಿಐ): ಇಲ್ಲಿನ ಜವಾಹರ ಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ದೇಶ ವಿರೋಧಿ ಘೋಷಣೆ ಕೂಗಿದ ಸಂಬಂಧ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷನನ್ನು ಬಂಧಿಸಿರುವ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿದ್ದಾರೆ.

ವಿದ್ಯಾರ್ಥಿ ನಾಯಕ ಕನಯ್ಯಾ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿದರು ಎಂಬ ಆರೋಪ ಇದೆ. ಆದರೆ ಘಟನೆ ಸಂದರ್ಭದಲ್ಲಿ ನಿಜವಾಗಿಯೂ ಘೋಷಣೆ ಕೂಗಿದವರು ಎಬಿವಿಪಿ ಕಾರ್ಯಕರ್ತರು ಎಂಬ ಮಾಹಿತಿ ಇದೆ. ಹೀಗಾಗಿ ಸತ್ಯಾಸತ್ಯತೆಯನ್ನು ಪತ್ತೆ ಮಾಡುವ ಸಲುವಾಗಿ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಕೇಜ್ರಿವಾಲ್ ‘ಟ್ವೀಟ್’ ಮಾಡಿದ್ದಾರೆ.

ಎಡಪಕ್ಷಗಳ ನಾಯಕರಾದ ಸೀತಾರಾಂ ಯೆಚೂರಿ, ಡಿ. ರಾಜಾ, ಜೆಡಿಯು ಮುಖಂಡ ಕೆ.ಸಿ. ತ್ಯಾಗಿ ಮತ್ತಿತರರು  ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ  ಮಾತುಕತೆ ನಡೆಸಿದ ನಂತರ ದೆಹಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಕೂಡ ಎಡಪಕ್ಷಗಳ ಮುಖಂಡರು ಭೇಟಿ ಮಾಡಿ ಕನಯ್ಯಾ ಬಿಡುಗಡೆಗೆ ಒತ್ತಾಯಿಸಿದ್ದರು.

ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್‌.ಬಸ್ಸಿ ಅವರು ರಾಜನಾಥ್ ಸಿಂಗ್ ಅವರಿಗೆ ಪ್ರಕರಣದ ತನಿಖೆಯ ಕುರಿತು ಮಾಹಿತಿ ನೀಡಿದ್ದಾರೆ. ದೆಹಲಿ ಪೊಲೀಸರು ಕಾನೂನಿನ ನಿಯಮಗಳಿಗೆ ಅನುಗುಣವಾಗಿ ಕ್ರಮ ತೆಗೆದುಕೊಂಡಿದ್ದಾರೆ ಎಂದು ಬಸ್ಸಿ ಸಮರ್ಥಿಸಿಕೊಂಡಿದ್ದಾರೆ.

ಸಂಸತ್‌ ಮೇಲಿನ ದಾಳಿಕೋರ ಅಫ್ಜಲ್‌ ಗುರು ಪರ ಕಾರ್ಯಕ್ರಮ ಆಯೋಜಿಸಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪಕ್ಕಾಗಿ  ಕನಯ್ಯಾನನ್ನು ಬಂಧಿಸಲಾಗಿತ್ತು.

ಪ್ರತಿಭಟನೆ ತೀವ್ರ
ಜೆಎನ್‌ಯು ವಿವಿ ವಿದ್ಯಾರ್ಥಿ ನಾಯಕ ಕನಯ್ಯಾ ಕುಮಾರ್‌ ಬಂಧನ ಖಂಡಿಸಿ  ವಿವಿ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆ ಶನಿವಾರ ತೀವ್ರಗೊಂಡಿದ್ದು, ರಾಜಕೀಯ ತಿರುವು  ಪಡೆದುಕೊಳ್ಳುವ ಸಾಧ್ಯತೆ ಇದೆ. ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ ಕನಯ್ಯಾಗೆ ಬೆಂಬಲ ನೀಡಲು ಜೆಎನ್‌ಯು ಆವರಣಕ್ಕೆ ಬಂದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ, ಎಬಿವಿಪಿ ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಯಿತು.

ದೇಶಕ್ಕೆ ಅವಮಾನ: ‘ಜೆಎನ್‌ಯುದಲ್ಲಿನ ಭಾರತ ವಿರೋಧಿ ಕಾರ್ಯಕ್ರಮ ಬೆಂಬಲಿಸಿ ಟ್ವೀಟ್‌ ಮಾಡಿದ್ದ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್‌ನ ವಕ್ತಾರರಂತೆ ರಾಹುಲ್ ಮಾತನಾಡುವ ಮೂಲಕ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ ಶರ್ಮ ಟೀಕಿಸಿದ್ದಾರೆ.

ವಿ.ವಿ ಆವರಣದಲ್ಲಿ ದೇಶ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ತಮಗೆ ನೀಡಿರುವ ಪದವಿ ಪ್ರಮಾಣಪತ್ರಗಳನ್ನು ಹಿಂದಕ್ಕೆ ನೀಡುವುದಾಗಿ ವಿ.ವಿ.ಯ ಹಳೆಯ ವಿದ್ಯಾರ್ಥಿಗಳಾಗಿರುವ ನಿವೃತ್ತ ಸೈನಿಕರು ಎಚ್ಚರಿಕೆ ನೀಡಿದ್ದಾರೆ.

ಜೆಎನ್‌ಯು ದೇಶ ವಿರೋಧಿ ಚಟುವಟಿಕೆಗಳ ತಾಣವಾಗಿ ಮಾರ್ಪಡಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ವಿವಿಗೆ  ಪೊಲೀಸ್‌ ಪ್ರವೇಶ ವಿರೋಧಿಸಿ ನಾಲ್ವರು ಡೀನ್‌ಗಳು  ಕುಲಪತಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT