ADVERTISEMENT

ವಿವಾದ ಸೃಷ್ಟಿಸಿದ ಮಾತಿನ ವರಸೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2014, 14:20 IST
Last Updated 10 ಏಪ್ರಿಲ್ 2014, 14:20 IST

ನವದೆಹಲಿ (ಪಿಟಿಐ): ಚುನಾವಣಾ ಪ್ರಚಾರ ಸಂದರ್ಭದಲ್ಲಿ ದ್ವೇಷ ಭಾಷಣ ಮಾಡಿದ ಉತ್ತರ ಪ್ರದೇಶದ ಮೂವರು ರಾಜಕೀಯ ನಾಯಕರ ಭಾಷಣ­­ಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ.

‘ಮುಸ್ಲಿಂ ಯೋಧರಿಂದಾಗಿ ಕಾರ್ಗಿಲ್‌­­ನಲ್ಲಿ ಭಾರತಕ್ಕೆ ಗೆಲುವು’ –ಅಜಂ ಖಾನ್‌ ಹೇಳಿಕೆ, ‘ಬಿಜೆಪಿ ನಾಯಕ ಅಮಿತ್‌ ಷಾ ಅವರನ್ನು ನಾಶ ಮಾಡು­ತ್ತೇನೆ’ – ಮುಲಾಯಂ ಸಿಂಗ್‌  ಮತ್ತು ‘ಬಿಜೆಪಿ ಪ್ರಧಾನಿ ಅಭ್ಯರ್ಥಿ­ಯನ್ನು ಸಮುದ್ರಕ್ಕೆ ಎಸೆಯುತ್ತೇನೆ’ ಎಂದು ಅಜಿತ್ ಸಿಂಗ್‌ ನೀಡಿದ ಹೇಳಿಕೆಗಳು ವಿವಾದ ಸೃಷ್ಟಿಸಿವೆ.

1999ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಭಾರತದ ಗೆಲುವಿಗೆ ಮುಸ್ಲಿಂ ಯೋಧರೇ ಕಾರಣ ಎಂದು ಸೋಮ­ವಾರ ಅಜಂ ಖಾನ್‌ ಹೇಳಿಕೆ ನೀಡಿದ್ದರು.

ಸ್ವಯಂ ಪ್ರೇರಣೆಯ ತನಿಖೆ: ಅಜಂ ಖಾನ್ ಅವರ ಕಾರ್ಗಿಲ್ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಸ್ವಯಂ ಪ್ರೇರಣೆಯಿಂದ ತನಿಖೆ ಆರಂಭಿಸಿದೆ.

ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌, ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್‌ ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆಯೂ ವಿವರವಾದ ವರದಿ ನೀಡುವಂತೆ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಚುನಾ­ವಣಾ ಆಯೋಗ ಸೂಚಿಸಿದೆ. ವಿವಾದಾತ್ಮಕ ಹೇಳಿಕೆಗಳ ಸಿ.ಡಿ.­ಗಳನ್ನು ಒದಗಿಸುವಂತೆ  ಸೂಚಿಸ­ಲಾಗಿದೆ.

ಕೋಮುವಾದ   ತಡೆಯಲು ಬಿಜೆಪಿಯ ಪ್ರಧಾನಿ ಅಭ್ಯರ್ಥಿ­ಯನ್ನು ಸಮುದ್ರಕ್ಕೆ ಎಸೆಯು­ತ್ತೇನೆ’ ಎಂಬ ಅಜಿತ್‌ ಸಿಂಗ್‌ ಹೇಳಿಕೆ, ಪ್ರಚೋದ­ನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ಅಮಿತ್‌ ಷಾ ಅವರನ್ನು ನಾಶಮಾ­ಡುತ್ತೇನೆ ಎಂಬ ಮುಲಾಯಂ ಹೇಳಿಕೆ ಮತ್ತು ಅಜಂ ಖಾನ್‌ ಅವರ ಕಾರ್ಗಿಲ್‌ ಹೇಳಿಕೆಗಳ ಬಗ್ಗೆ ವಿವರ ಒದಗಿಸುವಂತೆ ಹೇಳಲಾಗಿದೆ.

‘ಕಾರ್ಗಿಲ್‌ ಯುದ್ಧ ಮತ್ತು ಇತರ ವಿಷಯಗಳಿಗೆ ಸಂಬಂಧಿ­ಸಿದ ಅಜಂ ಖಾನ್‌ ಅವರ 30 ನಿಮಿಷದ ಭಾಷಣದ ವಿಡಿಯೊ­ವನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ತನಿಖೆಯೂ ಆರಂಭವಾಗಿದೆ. ಅಜಂ ಖಾನ್‌ ತಪ್ಪಿತಸ್ಥರು ಎಂದು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೋದಿ ವಿರುದ್ಧವೂ ಟೀಕೆ: ಸೋಮವಾರ ಗಾಜಿಯಾ­ಬಾದ್‌­ನಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಕೋಮು ಭಾವನೆ  ಕೆರಳಿಸುವಂತೆ ಅಜಂ ಖಾನ್‌ ಮಾತನಾ­ಡಿದ್ದರು ಎನ್ನಲಾಗಿದೆ. ‘ಕಾರ್ಗಿಲ್‌ ಯುದ್ಧದ ಗೆಲುವಿಗೆ ಹೋರಾಡಿದವರು ಹಿಂದೂ ಯೋಧರಲ್ಲ, ಮುಸ್ಲಿಂ ಯೋಧರ ಹೋರಾಟದಿಂದಾಗಿಯೇ ಗೆಲುವು ದೊರೆಯಿತು’ ಎಂಬ ಅವರು ಹೇಳಿಕೆ  ವರದಿಯಾಗಿದೆ.

ವಿವಾದಗಳಿಂದಲೇ ಪ್ರಸಿದ್ಧರಾಗಿರುವ ಖಾನ್‌ ಅವರು, ‘ಮೋದಿ ನಂ. 1 ಗೂಂಡಾ’ ಎನ್ನುವುದರ ಜೊತೆಗೆ, ‘ಉತ್ತರ ಪ್ರದೇಶದಲ್ಲಿ ಭಯೋತ್ಪಾದನೆ ನಡೆಸುವುದಕ್ಕೆ ಅವರು ಬಂದಿದ್ದಾರೆ’ ಎಂದೂ ಹೇಳಿದ್ದರು.

ಕಠಿಣ ಕ್ರಮಕ್ಕೆ ಬಿಜೆಪಿ ಆಗ್ರಹ: ಭದ್ರತಾ ಪಡೆಗಳನ್ನು ಕೋಮು ನೆಲೆಯಲ್ಲಿ ವಿಭಜಿಸಲು ಯತ್ನಿಸುತ್ತಿರುವ ಅಜಂ ಖಾನ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಬಿಜೆಪಿ ಆಗ್ರಹಿಸಿದೆ.

ಅಜಂ ಖಾನ್‌ ಅವರ ಹೇಳಿಕೆ ಧೀರ ಯೋಧರಿಗೆ ಮಾಡಿರುವ ಅವಮಾನ. ಚುನಾವಣಾ ಸಮಯದಲ್ಲಿ ಇಂತಹ ಹೇಳಿಕೆ ಕೋಮುವಾದಿ ರಾಜಕೀಯ­ವಾಗಿದೆ. ಇದು ರಾಷ್ಟ್ರೀಯ ಭದ್ರತೆ­ಯನ್ನೂ ಕೋಮುವಾದೀ­ಕರಣ­ಗೊಳಿಸುವ  ಯತ್ನವಾ­ಗಿದೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಎಸ್‌ಪಿ ಎಚ್ಚರಿಕೆಯ ಪ್ರತಿಕ್ರಿಯೆ: ಅಜಂ ಖಾನ್‌ ಹೇಳಿಕೆಗೆ ಎಸ್‌ಪಿ ಅತ್ಯಂತ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದೆ. ಈಡೇರದ ಆಕಾಂಕ್ಷೆಗಳಿಂದಾಗಿ ಇಂತಹ ಹೇಳಿಕೆಯನ್ನು ಅವರು ನೀಡಿರಬಹುದು ಎಂದು ಪಕ್ಷ ಹೇಳಿದೆ. ಯುದ್ಧದಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ಖರೆಲ್ಲರೂ ಒಂದಾಗಿ ಹೋರಾ-­ಡಿದ್ದಾರೆ ಎಂದು ಪಕ್ಷದ ವಕ್ತಾರ ಶಿವಪಾಲ್‌ ಸಿಂಗ್‌ ಯಾದವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT