ADVERTISEMENT

ವಿ.ವಿ.ಗೆ ನೆರವು ಘೋಷಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2014, 19:30 IST
Last Updated 2 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ಅಗತ್ಯ ಮೂಲ­ಸೌಕರ್ಯ ನಿರ್ಮಿಸಲು ಕೇಂದ್ರೀಯ ವಿದ್ಯಾ­ಲಯಗಳು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ತಲಾ ಒಂದು ಲಕ್ಷ ರೂಪಾಯಿ ಕೊಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದರು.

ರೇಡಿಯೋದಲ್ಲಿ ಭಾನುವಾರ ‘ಮನದ ಮಾತು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ವಿಶೇಷ ಸಾಮರ್ಥ್ಯವುಳ್ಳ ಒಂದು ಸಾವಿರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿವೇತನ ವನ್ನೂ ನೀಡಲಿದೆ ಎಂದರು.

ಮಾದಕ ವಸ್ತು ವ್ಯಸನ ಪಿಡುಗನ್ನು ತಡೆಯುವ ಬಗ್ಗೆ ಮುಂದಿನ ‘ಮನದ ಮಾತು’ವಿನಲ್ಲಿ ಮಾತನಾ­ಡುವು­ದಾಗಿ ತಿಳಿಸಿದರು.

‘ಈ ಕಾರ್ಯಕ್ರಮದಲ್ಲಿ ನಾನು ಪ್ರಸ್ತಾಪಿ­ಸುವ ವಿಷಯಗಳಿಗೆ ಸಂಬಂಧಿಸಿ­ದಂತೆ ಸರ್ಕಾರದ ವಿರುದ್ಧ ಟೀಕಾಪ್ರವಾ­ಹವೇ ಹರಿಯುತ್ತದೆ ಎಂಬುದು ನನಗೆ ಗೊತ್ತು. ಆದರೆ ಎಷ್ಟು ದಿನ ವಿಷಯಗಳನ್ನು ಮುಚ್ಚಿಟ್ಟು­ಕೊಂಡಿರಲು ಸಾಧ್ಯ? ಒಳ್ಳೆಯ ಉದ್ದೇಶಕ್ಕಾಗಿ ಸತ್ಯವನ್ನು ಹೇಳಲೇಬೇ­ಕಾಗುತ್ತದೆ. ಅದನ್ನು ನಾನು ಮಾಡುತ್ತಾ ಹೋಗುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಕೆಲವೇ ದಿನಗಳ ಹಿಂದೆ ‘ಮನದ ಮಾತಿನ’ ಮೊದಲ ಕಾರ್ಯಕ್ರಮದಲ್ಲಿ, ‘ಪ್ರತಿಯೊಬ್ಬರೂ ಒಂದಾದರೂ ಖಾದಿ ಉತ್ಪನ್ನ ಖರೀದಿಸಿ’ ಎಂದು ಕರೆ ನೀಡಿದ್ದೆ. ತಮ್ಮ ಕರೆಗೆ ಜನ ಉತ್ತಮವಾಗಿ ಸ್ಪಂದಿಸಿದ್ದು, ಖಾದಿ ಭಂಡಾರಗಳಲ್ಲಿ ಈ ಉತ್ಪನ್ನಗಳ ಮಾರಾಟ ಗಾಂಧಿ ಜಯಂತಿ ಸಂದರ್ಭದ ಒಂದು ವಾರದ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ ೧೨೫ರಷ್ಟು ಹೆಚ್ಚಾಗಿದೆ ಎಂದರು.

‘ಜನರು ನಿಷ್ಪ್ರಯೋಜಕರಾಗಿದ್ದು, ಅವರ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಿಸಿಕೊ­ಳ್ಳಬಾರದು’ ಎಂಬುದು ಕೆಲವರ ಭಾವನೆಯಾಗಿದೆ. ಆದರೆ, ಇದು ಸರಿಯಲ್ಲ. ಈ ಮನೋಭಾವವನ್ನು ಬದಲಿ­ಸಿಕೊಳ್ಳುವ ಅಗತ್ಯವಿದೆ. ವಾಸ್ತವವಾಗಿ, ‘ಜನರು ಬಹಳ ಮುಂದಿದ್ದು ಸರ್ಕಾರಗಳು ಹಿಂದುಳಿ­ದಿವೆ’ ಎಂದು ಮೋದಿ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.