ಭೋಪಾಲ್ (ಪಿಟಿಐ): ಬಿಳಿ ಹುಲಿಗಳ ಘರ್ಜನೆಯನ್ನು ಅವುಗಳ ನೈಸರ್ಗಿಕ ನೆಲೆಯಲ್ಲೇ ಕೇಳುವ ಅವಕಾಶ ಪ್ರವಾಸಿಗರಿಗೆ ದೊರೆಯಲಿದೆ. ಇಲ್ಲಿನ ರೇವಾ ಸಮೀಪದ ಮುಕುಂದ್ಪುರ್ ಅಭಯಾರಣ್ಯದದಲ್ಲಿ ವಿಶ್ವದ ಮೊದಲ ‘ಬಿಳಿ ಹುಲಿ ಸಫಾರಿ’ ಆರಂಭವಾಗಲಿದೆ.
‘ಶೇ 99ರಷ್ಟು ಕಾಮಗಾರಿ ಮುಗಿದಿದೆ. ಮುಂದಿನ ತಿಂಗಳಿನಲ್ಲೇ ಸಫಾರಿ ಆರಂಭವಾಗಬಹುದು. ಆರಂಭದಲ್ಲಿ ಎರಡು ಹೆಣ್ಣು ಮತ್ತು ಒಂದು ಗಂಡು ಬಿಳಿ ಹುಲಿಗಳನ್ನು ಸಫಾರಿಯಲ್ಲಿ ಬಿಡಲಾಗುತ್ತದೆ. ನಂತರ ನೈಸರ್ಗಿಕ ನೆಲೆಯಲ್ಲಿ ಅವುಗಳ ಸಂತಾನಭಿವೃದ್ಧಿಗೆ ಪ್ರಯತ್ನಿಸಲಾಗುತ್ತದೆ. ಬಿಳಿ ಹುಲಿಗಳ ಇತಿಹಾಸ ತಿಳಿಸುವ ವ್ಯವಸ್ಥೆಯೂ ಸಫಾರಿಯಲ್ಲಿ ಇರಲಿದೆ’ ಎಂದು ರಾಜ್ಯದ ಸಾರ್ವಜನಿಕ ಸಂಪರ್ಕ ಸಚಿವ ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ.
ಮೋಹನ್ ವೈಟ್ ಟೈಗರ್ ಸಫಾರಿ: ಈ ಸಫಾರಿಗೆ ‘ಮೋಹನ್ ವೈಟ್ ಟೈಗರ್ ಸಫಾರಿ’ ಎಂದು ಹೆಸರಿಡಲಾಗಿದೆ. ಮುಕುಂದ್ಪುರ್ ಅರಣ್ಯ ಪ್ರದೇಶದಲ್ಲಿ 1951ರಲ್ಲಿ ಮೊದಲ ಬಿಳಿ ಹುಲಿ ಪತ್ತೆಯಾಗಿತ್ತು. ಅದನ್ನು ಗುರುತಿಸಿದ್ದ ಮಹಾರಾಜ ಮಾರ್ತಾಂಡ ಸಿಂಗ್, ಬಿಳಿ ಹುಲಿಯನ್ನು ಹಿಡಿಸಿ ಅರಮನೆಗೆ ತರಿಸಿದ್ದರು. ಅದಕ್ಕೆ ಮೋಹನ್ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಮರುದಿನವೇ ಮೋಹನ್ ಅಲ್ಲಿಂದ ತಪ್ಪಿಸಿಕೊಂಡಿತ್ತು.
ನಂತರದ ಎರಡು ದಶಕಗಳ ಕಾಲ ಅದೇ ಅರಣ್ಯ ಪ್ರದೇಶದಲ್ಲಿ ಓಡಾಡಿಕೊಂಡಿದ್ದ ಮೋಹನ್ನ ಸಂಪರ್ಕಕ್ಕೆ ಬಂದ ಹೆಣ್ಣು ಬಿಳಿ ಹುಲಿಗಳಿಂದ, ಬಿಳಿ ಹುಲಿಗಳ ಸಂಖ್ಯೆ ಹೆಚ್ಚಾಗಿತ್ತು. ಅವುಗಳ ಸಂತತಿ ಇತರ ಪ್ರದೇಶಗಳಿಗೂ ಹರಡಿತ್ತು. ಇದೇ ಪ್ರದೇಶದಲ್ಲಿ ಬದುಕಿದ್ದ ಮೋಹನ್ನ ಸಂತತಿಯ ವಿರಾಟ್ ಎಂಬ ಗಂಡು ಹುಲಿ 1976ರಲ್ಲಿ ಮರಣ ಹೊಂದಿತ್ತು. ನಂತರ ಅಲ್ಲಿದ್ದ ಸುಖೇತಿ ಎಂಬ ಹೆಣ್ಣು ಹುಲಿಯನ್ನು ದೆಹಲಿಗೆ ಸ್ಥಳಾಂತರಿಸಲಾಗಿತ್ತು. ಆನಂತರ ಈ ಪ್ರದೇಶದಲ್ಲಿ ಬಿಳಿ ಹುಲಿಗಳೇ ಇರಲಿಲ್ಲ.
ಈಗ ವಿಶ್ವದಾದ್ಯಂತ ಬೇರೆ ಬೇರೆ ಅಭಯಾರಣ್ಯ ಮತ್ತು ಮೃಗಾಲಯಗಳಲ್ಲಿ 114 ಬಿಳಿ ಹುಲಿಗಳಿವೆ. ನಾಲ್ಕು ದಶಕಗಳ ನಂತರ ಬಿಳಿ ಹುಲಿಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಅವುಗಳನ್ನು ತರಲಾಗುತ್ತಿದೆ. ಇಲ್ಲಿ ಆರಂಭವಾಗಲಿರುವ ಬಿಳಿ ಹುಲಿ ತಳಿ ಅಭಿವೃದ್ಧಿ ಕೇಂದ್ರಕ್ಕೆ ಮಹಾರಾಜ ಮಾರ್ತಾಂಡ ಅವರ ಹೆಸರು ಇಡಲಾಗುತ್ತದೆ ಎಂದು ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.