ADVERTISEMENT

ವ್ಯಕ್ತಿಯನ್ನು ಹೊತ್ತೊಯ್ದ ಹುಲಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2014, 19:30 IST
Last Updated 27 ಜೂನ್ 2014, 19:30 IST

ಕ್ಯಾನಿಂಗ್‌, ಪಶ್ಚಿಮಬಂಗಾಳ (ಪಿಟಿಐ): ನಿಷೇಧಿತ ಅರಣ್ಯ ಪ್ರದೇಶದಲ್ಲಿ ಹಿರಿಯ  ನಾಗರಿಕರೊಬ್ಬರ ಮೇಲೆ ದಾಳಿ ನಡೆಸಿದ ಹುಲಿಯೊಂದು ಅವರನ್ನು ಹೊತ್ತುಕೊಂಡು ಕಾಡಿನಲ್ಲಿ ಕಣ್ಮರೆಯಾಗಿದೆ ಎಂದು ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ತಿಳಿಸಿದೆ.

62 ವರ್ಷದ ಸುನಿಲ್‌ ಮಝಿ ಮತ್ತು ಇತರ ಇಬ್ಬರು ದತ್ತಾ ಝಿಲ್‌ ಎಂಬ ತೊರೆಯಲ್ಲಿ ಏಡಿ ಹಿಡಿಯುತ್ತಾ ದೋಣಿಯಲ್ಲಿ ಸಾಗುತ್ತಿದ್ದರು. ಹಠಾತ್ತನೆ ದಡದಿಂದ ತೊರೆಗೆ ಧುಮುಕಿದ ಹುಲಿ ಈಜುತ್ತಾ ದೋಣಿಯತ್ತ ಬಂತು. ದೋಣಿಯ ಸಮತೋಲನಕ್ಕಾಗಿ ಇಬ್ಬರು ಎರಡು ಕೊನೆಗಳಲ್ಲಿ ಮತ್ತು ಮಝಿ ದೋಣಿಯ ಮಧ್ಯಭಾಗದಲ್ಲಿದ್ದರು.

ಮಝಿ ಅವರ ಮೇಲೆ ಹಾರಿದ ಹುಲಿ ಅವರನ್ನು ಕಚ್ಚಿಕೊಂಡು ಹೊರಟೇ ಹೋಯಿತು. ಇದನ್ನು ಕಂಡ ಇನ್ನಿಬ್ಬರು ದೋಣಿಯಿಂದ ನೀರಿಗೆ ಹಾರಿ ಹುಲಿಯ ಹಿಂದೆ ಈಜುತ್ತಾ ಹುಲಿಯನ್ನು ಬೆದರಿಸಲು ಪ್ರಯತ್ನಿಸಿದರು. ಆದರೆ ಹುಲಿ ಮಝಿ ಅವರನ್ನು ತನ್ನ ಹಿಡಿತದಿಂದ ಬಿಡಲೇ ಇಲ್ಲ.

ನೀರಿನಿಂದ ಹೊರಬಂದ ಇಬ್ಬರೂ ಹುಲಿಯನ್ನು ಅಟ್ಟಿಸಿಕೊಂಡು ಹೋದರಾದರೂ ಕಾಡಿಗೆ ನುಗ್ಗುವ ಧೈರ್ಯ ಅವರಲ್ಲಿರಲಿಲ್ಲ. ಹುಲಿ ಕಾಡಿನಲ್ಲಿ ಕಣ್ಮರೆಯಾಗುವುದನ್ನು ಇಬ್ಬರು ನೋಡುತ್ತಾ ನಿಲ್ಲಬೇಕಾಯಿತು. ಮಝಿ ಅವರ ದೇಹ ಇನ್ನೂ ಪತ್ತೆಯಾಗಿಲ್ಲ. ಪತ್ತೆಯಾಗುವ ಸಾಧ್ಯತೆಯೂ ಇಲ್ಲ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಸುಂದರ್‌ಬನದ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಮನುಷ್ಯರ ಮೇಲೆ ಹುಲಿ ದಾಳಿಯ ನಾಲ್ಕನೇ ಪ್ರಕರಣ ಇದು.  ಗುರುವಾರವಷ್ಟೇ ಇನ್ನೊಬ್ಬ ವ್ಯಕ್ತಿಯ ಮೇಲೆ ಹುಲಿ ದಾಳಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.