ADVERTISEMENT

ಶಾಸಕಾಂಗದಲ್ಲಿ ನ್ಯಾಯಾಂಗ ಹಸ್ತಕ್ಷೇಪ

ಗೋವಾ ಮುಖ್ಯಮಂತ್ರಿ ಪರಿಕ್ಕರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಪಣಜಿ (ಪಿಟಿಐ): ನ್ಯಾಯಾಂಗವೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಸೋಮವಾರ ಟೀಕಿಸಿದರು.

ವಿಧಾನಸಭೆಯಲ್ಲಿ ನ್ಯಾಯಾಂಗ ಉತ್ತರದಾಯಿತ್ವ ಮಸೂದೆಯ ಸಾಂವಿಧಾನಿಕ ತಿದ್ದುಪಡಿ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಇಲ್ಲ ಎಂದುಕೊಂಡಿದ್ದರೆ ಅದು ತಪ್ಪು ಪರಿಕಲ್ಪನೆಯಾಗುತ್ತದೆ. ನ್ಯಾಯಾಂಗ ನಿಂದನೆಯ ಭಯ ದಿಂದ ಯಾರೂ  ಈ ಬಗ್ಗೆ  ದನಿ ಎತ್ತುತ್ತಿಲ್ಲ ಎಂದರು.

‘ನ್ಯಾಯಾಧೀಶರೊಬ್ಬರಿಗೆ ಕಳುಹಿಸಿದ್ದ ₨15 ಲಕ್ಷ ಹಣವು ಆಕಸ್ಮಿಕವಾಗಿ ಬೇರೊಬ್ಬ ನ್ಯಾಯಾಧೀಶರಿಗೆ ತಲುಪಿದ್ದರಿಂದ ಒಂದು ಘಟನೆ ಬಹಿರಂಗವಾಗಿತ್ತು. ಈ ಹಣವನ್ನು ಏಕೆ ಕಳುಹಿಸಲಾಗಿತ್ತು? ಇದು ಭ್ರಷ್ಟಾಚಾರದ   ಪ್ರಕರಣ­ವಲ್ಲವೇ?’ ಎಂದು ಅವರು ಪ್ರಶ್ನಿಸಿದರು.
ನ್ಯಾಯಾಂಗ ಆಯೋಗ ರಚನೆಯ ಉದ್ದೇಶವನ್ನು ಬೆಂಬಲಿಸಿದ ಅವರು, ಆಯೋಗದಲ್ಲಿ ರಾಜಕಾರಣಿ­ಗಳಿಗಿಂತಲೂ ನ್ಯಾಯಾಂಗ ಹೆಚ್ಚಿನ ಪಾತ್ರ ವಹಿಸಲಿದೆ ಎಂದರು.

‘ಶಾಸನಗಳನ್ನು ತಮ್ಮದೇ ರೀತಿ ವ್ಯಾಖ್ಯಾನಿಸುವ ಕೆಲವು ನ್ಯಾಯಾಧೀಶರು ಹೊಸ ಕಾನೂನುಗಳನ್ನೇ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ನ್ಯಾಯಾಲಯ ತೀರ್ಪು ನೀಡಬಹುದು, ಆದರೆ ಕಾನೂನುಗಳನ್ನು ರಚಿಸಲು ಸಾಧ್ಯವಿಲ್ಲ.  ದುರದೃಷ್ಟವಶಾತ್‌ ಇತ್ತೀಚಿನ ದಿನಗಳಲ್ಲಿ ಕೆಲವು ಸನ್ನಿವೇಶಗಳಲ್ಲಿ ಕಾನೂನನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುವ ಮತ್ತು ತಮ್ಮದೇ ಕಾನೂನುಗಳನ್ನು ಸೃಷ್ಟಿಸುವ ಪ್ರಯತ್ನ ವನ್ನು ನ್ಯಾಯಾಂಗ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ’ ಎಂದು ಅವರು ಹೇಳಿದರು.

ಕಳೆದ ಕೆಲವು ವರ್ಷಗಳಿಂದ ನ್ಯಾಯಾಧೀಶರ ನೇಮಕಾತಿ ಗುಪ್ತವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಭೂಮಿ ವಶ: ‘ಸರ್ಕಾರಿ ಭೂಮಿಯನ್ನು ನ್ಯಾಯಾಂಗ ಆಕ್ರಮಿಸಿಕೊಳ್ಳುತ್ತಿದೆ ಎಂದೂ ಪರಿಕ್ಕರ್‌ ಆರೋಪಿಸಿದರು.

‘ಕೋರ್ಟ್‌ ತನಗೆ ಬೇಕಾದ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ತಾನೇ ಆದೇಶ ಮಾಡುತ್ತದೆ. ಇದಕ್ಕೆ ಅವಕಾಶ ಇಲ್ಲ. ನಿಮಗೆ(ಕೋರ್ಟ್‌) ತೋಚಿದಂತೆ ನಿರ್ಧಾರ ತೆಗೆದು­ಕೊಳ್ಳಲಾಗದು’ ಎಂದು ಪರಿಕ್ಕರ್‌ ಹೇಳಿದರು.

ಗೋವಾದಲ್ಲಿರುವ ಬಾಂಬೆ ಹೈ ಕೋರ್ಟ್‌ ಪೀಠ ಪಣಜಿಯ ಅಲ್ಟಿನ್ಹೊದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಶೀಘ್ರ­ದಲ್ಲಿಯೇ  ಪೋರ್ವೊರಿಮ್‌ಗೆ ಸ್ಥಳಾಂತರ ಹೊಂದಲಿದೆ.

ಜಿಲ್ಲಾ ನ್ಯಾಯಾಲಯ ಸಂಕೀರ್ಣ  ನಿರ್ಮಿಸಲೂ ನ್ಯಾಯಾಲಯವು ಗ್ರಾಮೀಣಾಭಿವೃದ್ಧಿ ಸಂಸ್ಥೆಯ (ಆರ್‌ಡಿಎ) ಭೂಮಿಯನ್ನು ಕಸಿದುಕೊಂಡಿದೆ. ಕೆಲವು ಬಂಗಲೆಗಳನ್ನೂ ಆಕ್ರಮಿಸಿಕೊಂಡಿದೆ ಎಂದು ಪರಿಕ್ಕರ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.