ADVERTISEMENT

ಶ್ರೀನಿವಾಸನ್ ನಿರ್ದೋಷಿ

ಸ್ಪಾಟ್‌ ಫಿಕ್ಸಿಂಗ್‌ ಹಗರಣ: ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದ ರಾಜ್‌ಕುಂದ್ರಾ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2014, 19:30 IST
Last Updated 17 ನವೆಂಬರ್ 2014, 19:30 IST

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಅಧ್ಯಕ್ಷ ಎನ್‌. ಶ್ರೀನಿವಾಸನ್‌ ಅವರು 2013ರ ಐಪಿಎಲ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಗರಣದ ಆರೋಪದಿಂದ ಮುಕ್ತರಾಗಿದ್ದಾರೆ. ಹೀಗಾಗಿ  ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಲು ಅವರಿಗೆ ಹಾದಿ ಸುಗಮವಾಗಿದೆ.

ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಸಮಿತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ‘ಶ್ರೀನಿವಾಸನ್‌ ಮೇಲಿನ ಆರೋಪ ಸಾಬೀತಾಗಿಲ್ಲ’ ಎಂದು ಹೇಳಿದೆ. ಆದರೆ, ಅವರ ಅಳಿಯ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಮಾಜಿ ಅಧಿಕಾರಿ ಗುರುನಾಥ್‌ ಮೇಯಪ್ಪನ್‌ ‘ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ’ ಎಂದು ತಿಳಿಸಿದೆ.

ಐಪಿಎಲ್‌ ಫ್ರಾಂಚೈಸ್‌ ರಾಜಸ್ತಾನ ರಾಯಲ್ಸ್ ತಂಡದ ಸಹ– ಮಾಲೀಕ ರಾಜ್‌ ಕುಂದ್ರಾ (ನಟಿ ಶಿಲ್ಪಾ ಶೆಟ್ಟಿ ಪತಿ) ಮತ್ತು ಐಪಿಎಲ್‌ ಸಿಒಒ ಸುಂದರ್ ರಾಮನ್‌ ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವ ವಿಷಯವನ್ನು ಮುದ್ಗಲ್‌ ಸಮಿತಿ ಬಹಿರಂಗ ಮಾಡಿದೆ. ರಾಮನ್‌ ಎಂಟು ಬಾರಿ ಬುಕ್ಕಿಗಳನ್ನು ಭೇಟಿಯಾಗಿದ್ದರು ಎನ್ನುವ ಆಘಾತಕಾರಿ ಅಂಶವೂ ಬಯಲಾಗಿದೆ.

‘ಮೇಯಪ್ಪನ್‌ ಬೆಟ್ಟಿಂಗ್‌ನಲ್ಲಿ  ಭಾಗಿಯಾಗಿ­ರು­ವುದು ತನಿಖೆಯಿಂದ ಗೊತ್ತಾಗಿದೆ. ತಾವು ತಂಗಿದ್ದ ಹೋಟೆಲ್‌ನ ಕೊಠಡಿಯಲ್ಲಿ ಪ್ರತ್ಯೇಕವಾಗಿ ಎರಡು ಬಾರಿ ಬುಕ್ಕಿಗಳನ್ನು ಭೇಟಿಯಾಗಿದ್ದರು. ಮೇಯಪ್ಪನ್‌ ಮತ್ತು ಬುಕ್ಕಿಗಳ ನಡುವೆ ನಡೆದ ಸಂಭಾಷಣೆಯ ಧ್ವನಿ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಅದು ಮೇಯಪ್ಪನ್‌ ಅವರ ಧ್ವನಿ ಎನ್ನುವುದು ಸಾಬೀತಾಗಿದೆ’ ಎಂದು ಸಮಿತಿ ತಿಳಿಸಿದೆ.

ದೇವರಿಗೆ ಪೂಜೆ: ಶ್ರೀನಿವಾಸನ್ ಸೋಮವಾರ ಬೆಳಿಗ್ಗೆ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ  ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಚೆನ್ನೈನ ಶ್ರೀನಿವಾಸನ್‌ 2011ರಿಂದ 13ರ ವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು. ಐಪಿಎಲ್‌ ಬೆಟ್ಟಿಂಗ್‌ ಹಾಗೂ ಸ್ಪಾಟ್‌ ಫಿಕ್ಸಿಂಗ್‌ ವಿವಾದದಲ್ಲಿ ಅವರ ಹೆಸರು ಕೇಳಿ ಬಂದ ಬಳಿಕ ಅಧ್ಯಕ್ಷ ಸ್ಥಾನದಿಂದ  ಸುಪ್ರೀಂ ಕೋರ್ಟ್‌ ಅವರನ್ನು ಅಮಾನತು ಮಾಡಿತ್ತು.

ಈ ಎಲ್ಲಾ ಘಟನೆಯ ನಂತರವೂ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡುವಂತೆ ಹಲವು ಬಾರಿ ಶ್ರೀನಿವಾಸನ್‌ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ಇದನ್ನು ಕೋರ್ಟ್‌ ತಳ್ಳಿ ಹಾಕಿತ್ತು. ಅವರು ಅಧ್ಯಕ್ಷರಾಗಲು ಬಂಗಾಳ ಕ್ರಿಕೆಟ್ ಸಂಸ್ಥೆ ಕೂಡಾ ವಿರೋಧ ವ್ಯಕ್ತಪಡಿಸಿತ್ತು.

ಏನಿದು ವಿವಾದ: ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್ ಪ್ರಕರಣದ ಕುರಿತು ತನಿಖೆ ನಡೆಸಿದ ಮುದ್ಗಲ್‌ ಸಮಿತಿ ನವೆಂಬರ್‌ ಮೂರರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ 35 ಪುಟಗಳ ವರದಿಯಲ್ಲಿ 13 ಆರೋಪಿಗಳನ್ನು ಹೆಸರಿಸಿತ್ತು. ಮೇಯಪ್ಪನ್‌, ರಾಜ್‌ ಕುಂದ್ರಾ ಮತ್ತು ಸುಂದರ ರಾಮನ್‌ ಅವರ ಹೆಸರುಗಳು ಮುದ್ಗಲ್‌ ವರದಿಯಲ್ಲಿ ಇರುವುದನ್ನು ಸುಪ್ರೀಂ ಕೋರ್ಟ್‌ ನ. 14ರಂದು ಮೊದಲ ಬಾರಿಗೆ ಬಹಿರಂಗ ಮಾಡಿತ್ತು. ಆದರೆ, ಇವರ ಮೇಲಿರುವ ಆರೋಪಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈ ಪ್ರಕರಣದ ವಿಚಾರಣೆ ನ. 24ರಂದು  ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಆರಂಭವಾಗಲಿದ್ದು, ಕುತೂಹಲ ಕೆರಳಿಸಿದೆ.

‘ಕ್ರಮ ಕೈಗೊಳ್ಳಲಿಲ್ಲ’
‘ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ನಲ್ಲಿ ಶ್ರೀನಿವಾಸನ್‌ ಪಾತ್ರ ಏನೂ ಇಲ್ಲ. ತನಿಖೆಗೂ ಅವರು ಅಡ್ಡಿಯಾಗಿಲ್ಲ. ಆದರೆ, ದುರ್ನಡತೆ ತೋರಿದ ಒಬ್ಬ ಕ್ರಿಕೆಟಿಗನ ವಿರುದ್ಧ ಅವರು ಕ್ರಮಕೈಗೊಳ್ಳಲಿಲ್ಲ’
–ಮುದ್ಗಲ್‌ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.