ADVERTISEMENT

ಷಾ, ಅಜಂ ಖಾನ್‌ ಪ್ರಚಾರಕ್ಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2014, 19:30 IST
Last Updated 11 ಏಪ್ರಿಲ್ 2014, 19:30 IST

ನವದೆಹಲಿ: ಪ್ರಚೋದನಕಾರಿ ಭಾಷಣ­ಗಳಿಂದ ವಿವಾದಕ್ಕೆ ಗುರಿ­ಯಾಗಿರುವ ನರೇಂದ್ರ ಮೋದಿ ಅವರ ಆಪ್ತ ಅಮಿತ್‌ ಷಾ ಮತ್ತು ಸಮಾಜ­ವಾದಿ ಪಕ್ಷದ ಅಜಂ ಖಾನ್‌ ಅವರಿಗೆ ಉತ್ತರ ಪ್ರದೇಶದಲ್ಲಿ ಯಾವುದೇ ಸಾರ್ವಜನಿಕ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ.

ಈ ಇಬ್ಬರು ಸಮಾಜದ ಸಮು­ದಾಯಗಳಲ್ಲಿ ದ್ವೇಷ ಕೆರಳಿಸುವಂತಹ ತೀವ್ರ ಪ್ರಚೋದ­ನಕಾರಿ ಭಾಷಣ­ಗಳನ್ನು ಮಾಡುತ್ತಿರುವ  ಬಗ್ಗೆ ಆಯೋಗ ಆತಂಕ ವ್ಯಕ್ತಪಡಿಸಿದೆ.

ಈ ಇಬ್ಬರು ಪಾಲ್ಗೊಳ್ಳುವ ಅಥವಾ ಪಾಲ್ಗೊಳ್ಳುವ ನಿರೀಕ್ಷೆ ಇರುವ ಯಾವುದೇ ಸಾರ್ವಜನಿಕ ಸಭೆ, ಬಹಿರಂಗ ಮೆರವಣಿಗೆ, ಸಾರ್ವ­ಜನಿಕ ಸಭೆ, ಸಾರ್ವಜನಿಕ ರ್‍ಯಾಲಿ, ರಸ್ತೆ ಯಾತ್ರೆಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಆಯೋಗ ನಿರ್ದೇಶನ ನೀಡಿದೆ.

ಈ ಇಬ್ಬರ ವಿರುದ್ಧದ, ವಿಶೇಷ­ವಾಗಿ ಅಜಂ ಖಾನ್‌ ವಿರುದ್ಧದ ಪ್ರಕ­ರ­ಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊ­ಳ್ಳಲು ತಡ ಮಾಡುತ್ತಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸರ್ಕಾರವನ್ನು ಆಯೋಗ ಇದೇ ವೇಳೆ ತರಾಟೆಗೆ ತೆಗೆದುಕೊಂಡಿದೆ. ಈ ಇಬ್ಬರ ವಿರುದ್ಧ ಕ್ರಿಮಿನಲ್‌ ವಿಚಾರಣೆ ಆರಂಭಿಸುವಂತೆಯೂ ಆಯೋಗ ಸೂಚಿಸಿದೆ.

ರಾಂಪುರ ಎಂಬಲ್ಲಿ ಗುರುವಾರ ಚುನಾ­­ವಣಾ ಭಾಷಣದ ವೇಳೆ ಖಾನ್‌ ಅವರು ಮೋದಿ ವಿರುದ್ಧ ಅವ­ಹೇಳನಕಾರಿ ಟೀಕೆ ಮಾಡಿರುವ ಸಂಬಂಧ ಆಯೋಗವು ಅವರಿಗೆ ಎರಡನೇ ಷೋಕಾಸ್‌ ನೋಟಿಸ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT