ADVERTISEMENT

ಷಾ ವಿರುದ್ಧ ಎಫ್‌ಐಆರ್‌

ಜನಸಮುದಾಯಗಳ ಮಧ್ಯೆ ದ್ವೇಷ ಬಿತ್ತನೆ ಆರೋಪ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ಬಿಜ್‌ನೋರ್‌/ ನವದೆಹಲಿ (ಪಿಟಿಐ): ಮುಜಪ್ಫರ್‌­ನಗರದಲ್ಲಿ ನಡೆದ ಕೋಮುಗಲಭೆಗಳಿಗೆ ಈ ಲೋಕ­ಸಭಾ ಚುನಾವಣೆಯಲ್ಲಿ ಸೇಡು ತೀರಿಸಿಕೊ­ಳ್ಳುವಂತೆ ಕರೆ ನೀಡಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಆಪ್ತ ಅಮಿತ್‌ ಷಾ ವಿರುದ್ಧ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಎಫ್‌ಐಆರ್‌ ದಾಖಲಿಸಲಾಗಿದೆ.

ಷಾ ಅವರ ಹೇಳಿಕೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಸೋಮವಾರ ನಡೆಯುವ ಸಭೆಯಲ್ಲಿ ಚರ್ಚಿಸಲಿದೆ. ಷಾ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ 153ನೇ ಸೆಕ್ಷನ್‌ (ಜನರನ್ನು ಪ್ರಚೋದಿ­ಸುವುದು) ಮತ್ತು ಜನಪ್ರತಿನಿಧಿ ಕಾಯಿದೆಯ 125ನೇ ಸೆಕ್ಷನ್‌ಗಳಡಿ (ಸಮುದಾಯಗಳ ಮಧ್ಯೆ ದ್ವೇಷ ಬಿತ್ತುವುದು) ದೂರು ದಾಖಲಿ­ಸಲಾಗಿದೆ.

ಕಾಂಗ್ರೆಸ್‌ ದೂರು:ಉತ್ತರ ಪ್ರದೇಶದ ಬಿಜೆಪಿ ಉಸ್ತು­ವಾರಿ ಹೊತ್ತಿರುವ ಅಮಿತ್‌ ಷಾ ಅವರು ಜನಸ­ಮು­ದಾಯಗಳ ಮಧ್ಯೆ ದ್ವೇಷ ಬಿತ್ತುವ ಹೇಳಿಕೆ ನೀಡುವ ಮೂಲಕ ಜನಪ್ರತಿನಿಧಿ ಕಾಯಿದೆಯ 125ನೇ ಸೆಕ್ಷನ್‌ ಅನ್ವಯ ಅಪರಾಧ ಎಸಗಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷವು ಶುಕ್ರವಾರ ದೂರು ನೀಡಿತ್ತು.

ಕಳೆದ ವರ್ಷ ಕೋಮುಗಲಭೆಗಳಿಂದ ನಲುಗಿದ ಮುಜಪ್ಫರ್‌ನಗರದಲ್ಲಿ ಅಮಿತ್‌ ಷಾ ಗುರುವಾರ ಮಾಡಿದ ಭಾಷಣ­ವನ್ನು ಗಂಭೀರವಾಗಿ ಪರಿಗಣಿ­ಸಿದ ರಾಜ್ಯದ ಮುಖ್ಯ ಚುನಾವ­ಣಾಧಿಕಾರಿಯವರು ಭಾಷಣದ ಸಿ.ಡಿ.ಯನ್ನು ಲಖನೌ ಚುನಾವಣಾ ಆಯೋಗ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದ್ದರು.

ಆ ಪ್ರಕಾರ ಭಾಷಣದ ಸಿ.ಡಿ.ಯನ್ನು ಉತ್ತರ ಪ್ರದೇಶ ಚುನಾವಣಾಧಿ­ಕಾರಿಗಳು  ಆಯೋಗಕ್ಕೆ ಸಲ್ಲಿಸಿದ್ದರು. ಇದರ ಜತೆಗೆ ಜಿಲ್ಲಾ ಚುನಾವಣಾ­ಧಿಕಾರಿಯ  ವರದಿಯನ್ನೂ  ಲಗತ್ತಿಸಿದ್ದರು. ನಂತರ ಷಾ ಅವರ ಹೇಳಿಕೆಯನ್ನು ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಪ್ರಧಾನ ಕಚೇರಿಯಿರುವ ‘ನಿರ್ವಾಚನ ಸದನ್‌’ಗೆ ಕೂಡ ಕಳುಹಿಸಲಾಗಿತ್ತು.

‘ಮುಜಫ್ಫರ್‌ನಗರದಲ್ಲಿ ಕಳೆದ ವರ್ಷ ನಡೆದ ಕೋಮುಗಲಭೆಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಈಗ ನಡೆಯಲಿರುವ ಲೋಕಸಭಾ ಚುನಾವಣೆ ಒಂದು ಸದವಕಾಶ’ ಎಂದು ಅಮಿತ್‌ ಷಾ ಚುನಾವಣಾ ಭಾಷಣದಲ್ಲಿ ಹೇಳಿದ್ದರು.ಸಮಾಜದ ಶಾಂತಿ ಕದಡುವ ಹೇಳಿಕೆ ನೀಡಿರುವ ಅಮಿತ್‌ ಷಾ ಅವರು ಉತ್ತರ ಪ್ರದೇಶ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಸಮಾಜವಾದಿ ಪಕ್ಷ, ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಗಳು ಒತ್ತಾಯಿಸಿದ್ದವು.

ಧ್ರುವೀಕರಣದ ಸಂಚು: ಬಿಜೆಪಿ
ಅಮಿತ್‌ ಷಾ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಬಿಜ್‌ನೋರ್‌ ಜಿಲ್ಲಾಡ­ಳಿತದ ಕ್ರಮವನ್ನು ಬಿಜೆಪಿ ಖಂಡಿಸಿದೆ.ಷಾ ಅವರ ವಿರುದ್ಧದ ಈ ಕ್ರಮದ ಹಿಂದೆ ಯಾವ ಸದುದ್ದೇಶವೂ ಇಲ್ಲ. ಉತ್ತರ ಪ್ರದೇಶದ ಚುನಾವಣಾ ಚಿತ್ರಣವನ್ನು ಧ್ರುವೀಕರಣಗೊಳಿಸುವ ಹಾಗೂ ಕೋಮುವಾದಗೊಳಿಸುವ ದುರುದ್ದೇಶ ಇದರ ಹಿಂದಿದೆ  ಎಂದು ಆಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT