ADVERTISEMENT

ಸಂಕಷ್ಟದಲ್ಲಿ ಐದಾರು ಲಕ್ಷ ಸಂತ್ರಸ್ತರು

ಕಾಶ್ಮೀರ ಪ್ರವಾಹ: 30 ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2014, 19:30 IST
Last Updated 11 ಸೆಪ್ಟೆಂಬರ್ 2014, 19:30 IST

ನವದೆಹಲಿ/ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ಇಳಿಮುಖವಾದರೂ ಇನ್ನೂ ಐದಾರು ಲಕ್ಷ ಜನರು ಪ್ರವಾಹದಲ್ಲಿ  ಸಿಲುಕಿ­ದ್ದಾರೆ.
ಹಗಲು, ರಾತ್ರಿ ಎನ್ನದೇ 24 ಗಂಟೆಯೂ ಅವಿರತವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನಾಪಡೆಗಳು ಗುರುವಾರ ಎರಡು ಸಾವಿರ ಜನರನ್ನು ರಕ್ಷಿಸುವಲ್ಲಿ ಯಶಸ್ವಿ­ಯಾಗಿವೆ.  ರಕ್ಷಣಾ ಕಾರ್ಯಾಚರಣೆ ಹತ್ತನೇ  ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಒಟ್ಟು 96 ಸಾವಿರ ಜನರನ್ನು ರಕ್ಷಿಸಲಾಗಿದೆ.|

ಪರಿಹಾರ ಕಾರ್ಯಾಚರಣೆ ಮಂದಗತಿ­ಯಲ್ಲಿ ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದ ಕಾರಣ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮತ್ತು ಗೃಹ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ ನೇತೃತ್ವದ ತಂಡ  ಗುರುವಾರ ಶ್ರೀನಗರಕ್ಕೆ ಧಾವಿಸಿದೆ. ಗೋಸ್ವಾಮಿ ಮೂಲತಃ ಜಮ್ಮು ಕಾಶ್ಮೀರದವರಾದ ಕಾರಣ ಕಾರ್ಯಾ­ಚರಣೆ ನಿರ್ವಹಿಸಲು ಅವರಿಗೆ ಸುಲಭ­ವಾಗಬಹುದು ಎಂಬ ಲೆಕ್ಕಾಚಾರದಿಂದ ಅವರನ್ನು  ಕಳಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ನದಿಗಳಲ್ಲಿಯ ನೀರಿನ ಮಟ್ಟ ಆರು ಅಡಿ ಇಳಿದರೂ ರಭಸ ಕಡಿಮೆ­ಯಾಗಿಲ್ಲ. ಶ್ರೀನಗರ ಹೊರತುಪಡಿಸಿ ರಾಜ್ಯದ ಬಹುತೇಕ ಕಡೆಗಳಲ್ಲಿ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳು­ತ್ತಿದೆ. ಆಹಾರ ಸಾಮಗ್ರಿಗಳಿಗಿಂತ ಮಕ್ಕಳ ಹಾಲಿನ ಪುಡಿ, ನೀರು ಶುದ್ಧೀಕರಣಕ್ಕೆ ಕ್ಲೋರಿನ್ ಮಾತ್ರೆ, ಸಾಂಕ್ರಾಮಿಕ ರೋಗ ಹಬ್ಬುವ ಭೀತಿಯ ಕಾರಣ ಅಗತ್ಯ ಔಷಧ, ತಾತ್ಕಾಲಿಕ ಟೆಂಟ್‌ ನಿರ್ಮಿಸಲು ಟಾರ್ಪಾಲಿನ್‌, ಹೊದಿಕೆ, ಕಂದೀಲು, ಅಡುಗೆ ಪಾತ್ರೆ, ಬ್ಯಾಟರಿಗಳ ಅಗತ್ಯವಿದೆ ಎಂದು ಸಂತ್ರಸ್ತರು ಬೇಡಿಕೆ ಇಟ್ಟಿದ್ದಾರೆ.

ಉಚಿತ ವಿಮಾನ, ರೈಲು ಸೇವೆ: ರಾಜ್ಯ­ದಿಂದ ಹೊರ ಹೋಗುತ್ತಿರುವ ಎಲ್ಲ ರೈಲು ಬೋಗಿ, ವಿಮಾನ ಹಾಗೂ ವಾಹನಗಳು ತುಂಬಿ ತುಳುಕುತ್ತಿವೆ.
ಜಮ್ಮು ಮತ್ತು ಕಾಶ್ಮೀರದಿಂದ ಮುಂಬೈ, ಬೆಂಗಳೂರು, ಚಂಡೀಗಡ, ಅಹಮದಾಬಾದ್‌ ಸೇರಿದಂತೆ ಹಲವು ನಗರಗಳಿಗೆ ವಿಶೇಷ ವಿಮಾನ ಆರಾಟ ಆರಂಭಿಸಲಾಗಿದೆ. ಪ್ರತಿನಿತ್ಯ 50 ಸಾವಿರ ಉಚಿತ ಕುಡಿಯುವ ನೀರಿನ ಬಾಟಲ್‌ಗಳನ್ನು ರವಾನಿಸಲಾಗುತ್ತಿದೆ.

ಕೊಚ್ಚಿಹೋದ ಬದುಕು
ಕಾಶ್ಮೀರದ 12 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಪ್ರಾಣ ಮತ್ತು ಆಸ್ತಿಗೆ ಹಾನಿಯಾಗಿದೆ. ನಾಲ್ಕು ಜಿಲ್ಲೆಗಳಂತೂ ಸಂಪೂರ್ಣವಾಗಿ ನಡುಗಡ್ಡೆಗಳಾಗಿ ಪರಿವರ್ತನೆಗೊಂಡಿವೆ. ಪ್ರವಾಹದಿಂದ ಒಟ್ಟು 20 ಲಕ್ಷ ನಾಗರಿಕರು ತೊಂದರೆಗೀಡಾಗಿದ್ದಾರೆ. 170 ಕಿ.ಮೀ ರಸ್ತೆ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, 50 ಸೇತುವೆಗಳು ಕುಸಿದು ಬಿದ್ದಿವೆ. ಸ್ಥಳೀಯ ಆಡಳಿತ ಸ್ಥಾಪಿಸಿರುವ 150 ನಿರಾಶ್ರಿತರ ಶಿಬಿರಗಳಲ್ಲಿ ಕನಿಷ್ಠ ಒಂದು ಲಕ್ಷ ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಬ್ಯಾಂಕ್‌ಗಳಲ್ಲಿರುವ ಗ್ರಾಹಕರ ಠೇವಣಿ, ಹಣ, ಚಿನ್ನಾಭರಣ ಸುರಕ್ಷಿತವಾಗಿವೆ. 30 ಸಾವಿರ ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

‘ಸರ್ಕಾರವೇ ಕೊಚ್ಚಿ ಹೋಗಿತ್ತು’
ಶ್ರೀನಗರ (ಪಿಟಿಐ): ‘ಭೀಕರ ಪ್ರವಾಹ­ದಲ್ಲಿ ವಿಧಾನಸಭೆ, ಹೈಕೋರ್ಟ್‌, ಪೊಲೀಸ್‌್ ಪ್ರಧಾನ ಕಚೇರಿ, ಆಸ್ಪತ್ರೆ­ಗಳು...ಎಲ್ಲವೂ ಜಲಸಮಾಧಿ­ಯಾಗಿ­ದ್ದವು. ಪ್ರವಾಹ ಎದು­ರಾದ ಮೊದಲ ೩೬ ಗಂಟೆಗಳಲ್ಲಿ ಸರ್ಕಾರವೇ ಸ್ತಬ್ಧ­ವಾಗಿತ್ತು’....
ಜಮ್ಮು–ಕಾಶ್ಮೀರದ ಮುಖ್ಯ­ಮಂತ್ರಿ ಒಮರ್‌ ಅಬ್ದುಲ್ಲಾ ಅವರು ಪ್ರವಾಹದ  ಭೀಕರತೆಯನ್ನು ನೆನಪಿಸಿ­ಕೊಂಡಿದ್ದು ಹೀಗೆ.ಮೊದಲ ಮೂರು ದಿನಗಳಲ್ಲಿ ಮುಖ್ಯಮಂತ್ರಿ ತಮ್ಮ ಸಚಿವ ಸಂಪುಟದ ಬಹುತೇಕರನ್ನು ಸಂಪರ್ಕಿಸು­ವುದಕ್ಕೂ ಸಾಧ್ಯ­ವಾಗಿರ­ಲಿಲ್ಲ.

ಮುಖ್ಯಮಂತ್ರಿ  ನಿವಾಸಕ್ಕೂ ವಿದ್ಯುತ್‌ ಪೂರೈಕೆ ಇಲ್ಲ. ಅವರ ಮೊಬೈಲ್‌ ಫೋನ್‌ ಸಂಪರ್ಕವೂ  ಕಡಿದುಹೋಗಿದೆ. ಆದರೆ, ಅವರು ಅತಿಥಿ ಗೃಹವನ್ನು ತಾತ್ಕಾಲಿಕ­ವಾಗಿ ತಮ್ಮ ಕಾರ್ಯಾಲಯ ಮಾಡಿ­ಕೊಂಡು  ಪರಿಹಾರ ಕಾರ್ಯಾ­ಚರ­ಣೆಗೆ ನಿರ್ದೇಶನ ನೀಡುತ್ತಿದ್ದಾರೆ.

‘ನನ್ನ ರಾಜಧಾನಿ (ಶ್ರೀನಗರ) ಜಲಾ ವ­ೃತ­ಗೊಂಡಿತ್ತು.  ಒಂದು ಕೊಠ­ಡಿ­­ಯಲ್ಲಿ ನಾಲ್ವರು ಅಧಿಕಾರಿಗಳ ಜತೆ  ನಾನು ಸರ್ಕಾರ ನಡೆಸಿದೆ’ ಎಂದು ಒಮರ್‌ ಅಬ್ದುಲ್ಲಾ  ತಿಳಿಸಿ­ದ್ದಾರೆ. ರಕ್ಷಣಾ ಕಾರ್ಯದಲ್ಲಿ ಗಣ್ಯರಿಗೆ ಆದ್ಯತೆ ನೀಡಲಾಗಿದೆ ಎನ್ನುವ ಆರೋಪ ಅಲ್ಲಗಳೆದ ಅವರು, ‘ಸ್ವತಃ ನನ್ನ ಸಂಬಂಧಿ­­ಕರು ಅವರ ಮನೆಗಳಲ್ಲಿ ಸಿಕ್ಕಿ­ಕೊಂಡಿ­ದ್ದರು’ ಎಂದಿದ್ದಾರೆ.

ಗುಜ­ರಾತ್‌­ನಲ್ಲಿ ಸಂಭವಿಸಿದ ಭೂಕಂಪನ, ಉತ್ತರಾ­ಖಂಡ ಹಾಗೂ ಒಡಿಶಾದಲ್ಲಿ ಎದುರಾಗಿದ್ದ ಪ್ರವಾಹ­ದಲ್ಲಿ ರಾಜ್ಯಗಳ ರಾಜಧಾನಿ­ಗಳಿಗೆ ಇಂಥ ಘೋರ ಪರಿಸ್ಥಿತಿ ಎದು­ರಾಗಿ­ರಲಿಲ್ಲ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.