ADVERTISEMENT

ಸಂತ್ರಸ್ತರಿಗೆ ಪರಿಹಾರ ರಾಜ್ಯಗಳ ಹೊಣೆ

ಪಿಟಿಐ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಸಂತ್ರಸ್ತರಿಗೆ ಪರಿಹಾರ ರಾಜ್ಯಗಳ ಹೊಣೆ
ಸಂತ್ರಸ್ತರಿಗೆ ಪರಿಹಾರ ರಾಜ್ಯಗಳ ಹೊಣೆ   

ನವದೆಹಲಿ: ಗೋರಕ್ಷಕರಿಂದ ಹಿಂಸೆಗೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡುವುದು ರಾಜ್ಯ ಸರ್ಕಾರಗಳ ಹೊಣೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.

ಸಂತ್ರಸ್ತರಿಗೆ ಪರಿಹಾರ ಯೋಜನೆ ರೂಪಿಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವು ರಾಜ್ಯಗಳಿಗೆ ಸೂಚನೆ ನೀಡಿದೆ.

‘ಹಿಂಸೆಗೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ನ್ಯಾಯಾಲಯಗಳು ಆದೇಶ ನೀಡಿವೆ. ಆ ಆದೇಶಗಳು ಪಾಲನೆಯಾಗುತ್ತಿಲ್ಲ. ಗೋರಕ್ಷಕರಿಂದ ಹತ್ಯೆಯಾದ ಜುನೇದ್‌ ಕುಟುಂಬ ಸೇರಿದಂತೆ ಇದುವರೆಗೂ ಯಾವ ಸಂತ್ರಸ್ತರಿಗೂ ಪರಿಹಾರ ಸಿಕ್ಕಿಲ್ಲ’ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ನ್ಯಾಯಾಲಯದ ಗಮನ ಸೆಳೆದರು.

ADVERTISEMENT

ವರದಿ ಸಲ್ಲಿಸಲು ಅ.13ರ ಗಡುವು: ಗೋರಕ್ಷಣೆ ಹೆಸರಿನ ಹಿಂಸಾಚಾರ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಅ.13ರ ಒಳಗಾಗಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ 22 ರಾಜ್ಯಗಳಿಗೆ ಸೂಚಿಸಿದೆ.

ಸೆಪ್ಟೆಂಬರ್‌ 6ರಂದು ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹಿಂಸಾಚಾರ ತಡೆಗೆ ವಾರದೊಳಗೆ ಜಿಲ್ಲಾ ಮಟ್ಟದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು.

ಆದೇಶ ಎಷ್ಟರ ಮಟ್ಟಿಗೆ ಪಾಲನೆಯಾಗಿದೆ ಎಂಬ ಬಗ್ಗೆ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ ಎಂದು ಮಿಶ್ರಾ ತಾಕೀತು ಮಾಡಿದರು. ‘ಯಾರೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು’ ಎಂದು ಎಚ್ಚರಿಕೆ ನೀಡಿದರು.

ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ ತಡೆಗೆ ರಾಷ್ಟ್ರೀಯ ನೀತಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಇಂದಿರಾ ಜೈಸಿಂಗ್‌ ಮನವಿ ಮಾಡಿದರು.

ಕರ್ನಾಟಕ ವರದಿ

ಕರ್ನಾಟಕ, ಉತ್ತರ ಪ್ರದೇಶ, ಜಾರ್ಖಂಡ್‌, ರಾಜಸ್ಥಾನ, ಗುಜರಾತ್‌ ಸುಪ್ರೀಂ ಕೋರ್ಟ್‌ಗೆ ಈಗಾಗಲೇ ವರದಿ ಸಲ್ಲಿಸಿವೆ. ಬಿಹಾರ ಮತ್ತು ಮಹಾರಾಷ್ಟ್ರ ಶುಕ್ರವಾರ ವರದಿ ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.