ADVERTISEMENT

‘ಸಂಧಾನಕಾರನಾಗಿ ಸ್ವಾಮಿ ಬೇಡ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಅಯೋಧ್ಯೆ:  ಅಯೋಧ್ಯೆ ವಿವಾದ ಪರಿಹಾರದ ಮಾತುಕತೆಯಲ್ಲಿ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಅವರು ಸಂಧಾನಕಾರರ ಪಾತ್ರ ನಿರ್ವಹಿಸುವುದಕ್ಕೆ  ಇತರ ಅರ್ಜಿದಾರರು ವಿರೋಧ ವ್ಯಕ್ತಪಡಿಸಿದ್ದಾರೆ.
 
ಈ ವಿಚಾರದಲ್ಲಿ ಮಾತುಕತೆ ನಡೆಸಲು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ಸಮಿತಿ ರಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
 
ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ  ಭೂ ವಿವಾದವು  ‘ಧರ್ಮ ಮತ್ತು ಭಾವನೆ’ಗಳಿಗೆ ಸಂಬಂಧಿಸಿದ ವಿಚಾರವಾಗಿದ್ದು ನ್ಯಾಯಾಲಯದ ಹೊರಗಡೆ ಮಾತುಕತೆ ಮೂಲಕ ಬಗೆಹರಿಸುವಂತೆ ಸುಪ್ರೀಂಕೋರ್ಟ್‌ ಸಲಹೆ ನೀಡಿತ್ತು.
 
ಜೊತೆಗೆ, ಎಲ್ಲ ಅರ್ಜಿದಾರರನ್ನು ಸಂಪರ್ಕಿಸಿ ಈ ವಿಚಾರದಲ್ಲಿ ಅವರ ನಿರ್ಧಾರ ಏನು ಎಂಬುದನ್ನು ಮಾರ್ಚ್‌ 31ರಂದು ತಿಳಿಸುವಂತೆ ಸುಪ್ರೀಂ ಕೋರ್ಟ್‌ ಸ್ವಾಮಿ ಅವರಿಗೆ ಸೂಚಿಸಿತ್ತು.
 
ಲಿಖಿತ ಹೇಳಿಕೆಗೆ ಸೂಚನೆ:  ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತವಾಗಿ ಹೇಳಿಕೆ ನೀಡುವಂತೆ ಬಿಜೆಪಿಯ ಹಿರಿಯ ಮುಖಂಡರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಸೇರಿದಂತೆ ಇತರ ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಗುರುವಾರ ಸೂಚಿಸಿದೆ.
 
ಏಪ್ರಿಲ್‌ 6ರ ಒಳಗಾಗಿ ಲಿಖಿತವಾಗಿ ಹೇಳಿಕೆ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್‌ ಮತ್ತು ಆರ್‌.ಎಫ್‌. ನಾರಿಮನ್‌ ಅವರಿದ್ದ  ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಏಪ್ರಿಲ್‌ 7ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.